Wednesday, January 22, 2025

ಕೊರೋನಾ ಪ್ರಕರಣಗಳ ಪತ್ತೆಗೆ ತಪಾಸಣೆ ಪ್ರಮಾಣ ಹೆಚ್ಚಿಸಿ – ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳನ್ನು ಪತ್ತೆ ಹಚ್ಚಲು ತಪಾಸಣೆ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೂಚನೆ ನೀಡಿದ್ದಾರೆ. ಇಂದು ಜಿಲ್ಲಾ ಭವನ ಸಭಾಂಗಣದಲ್ಲಿ ಜಿಲ್ಲಾ ಸರ್ವೇಕ್ಷಣಾ ಸಮಿತಿ ಸಭೆ ನಡೆಸಿದ ಅವರು, ಪ್ರಸ್ತುತ ಗಂಟಲ ದ್ರವ ಸಂಗ್ರಹಿಸುವ ಕಾರ್ಯಕ್ಕೆ 19 ಸಂಚಾರಿ ತಂಡಗಳಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರ ಹಂತದಲ್ಲಿ 63 ತಪಾಸಣಾ ತಂಡಗಳಿವೆ. ಶಿವಮೊಗ್ಗ ನಗರ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಲ್ಲಿ ಸಹ ಗಂಟಲ ದ್ರವ ಸಂಗ್ರಹಿಸುವ ಕಾರ್ಯವನ್ನು ಆರಂಭಿಸಬೇಕು. ಇದಕ್ಕಾಗಿ ಐದು ಸಂಚಾರಿ ತಂಡಗಳನ್ನು ಸಜ್ಜುಗೊಳಿಸುವಂತೆ ಸೂಚನೆ ನೀಡಿದ್ರು.

ಪ್ರಸ್ತುತ  ಆರ್.ಟಿ.ಪಿ.ಸಿ.ಆರ್ ಮೂಲಕ ಪ್ರತಿದಿನ 1,200 ಸ್ಯಾಂಪಲ್ ಪರೀಕ್ಷೆ ನಡೆಸಲಾಗುತ್ತಿದ್ದು, ಇದನ್ನು 1,500ಕ್ಕೆ ಹೆಚ್ಚಿಸಬೇಕು. ಇದೇ ರೀತಿ ಆರ್‍. ಎ. ಟಿ. ಮೂಲಕ 600 ಪರೀಕ್ಷೆ ನಡೆಸಲಾಗುತ್ತಿದ್ದು, ಇದನ್ನು 1,200 ಕ್ಕೆ ಹೆಚ್ಚಿಸಬೇಕು. ಪ್ರತಿದಿನ ಮೆಗ್ಗಾನ್ ಆಸ್ಪತ್ರೆಯಲ್ಲಿ 500, ವಿ.ಡಿ.ಆರ್.ಎಲ್‍ ನಲ್ಲಿ 500 ಪರೀಕ್ಷೆ ಗುರಿಯನ್ನು ಸಾಧಿಸಬೇಕು. ಒಂದೆರಡು ದಿನಗಳಲ್ಲಿ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಗಂಟಲ ದ್ರವ ಪರೀಕ್ಷೆ ಆರಂಭವಾಗಲಿದ್ದು, ಅಲ್ಲಿಯೂ ಪ್ರತಿ ದಿನ 500 ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದ್ರು. ಅಲ್ಲದೇ, ಹೋಂ ಕ್ವಾರಂಟೈನ್ ಪ್ರಮಾಣ ಹೆಚ್ಚಳ ಮಾಡಲು ಯೋಜಿಸಿದ್ದು, ಪ್ರಾಯೋಗಿಕವಾಗಿ ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ ಹೋಂ ಕ್ವಾರೆಂಟೈನ್ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಹೋಂ ಕ್ವಾರಂಟೈನ್‍ನಲ್ಲಿರುವವರಿಗೆ, ಅಗತ್ಯವಿರುವ ಸಾಧನಗಳನ್ನು ಖಾತ್ರಿಪಡಿಸಿ, ಅವರ ನಿರಂತರ ಮೇಲ್ವಿಚಾರಣೆಗೆ ವ್ಯವಸ್ಥೆ ಮಾಡಬೇಕು. ಕೊರೋನಾ ಪಾಸಿಟಿವ್ ವ್ಯಕ್ತಿಗಳ ಆರೋಗ್ಯ ತಪಾಸಣೆಗಾಗಿ ಆರಂಭಿಸಲಾಗಿರುವ ಟ್ರಯಾಜ್ ಕೇಂದ್ರಗಳಲ್ಲಿ ಸಂಬಂಧಪಟ್ಟ ವೈದ್ಯಕೀಯ ಸಿಬ್ಬಂದಿ ಇರಬೇಕು. ಜೊತೆಗೆ, ಗ್ರಾಮೀಣ ಪ್ರದೇಶದಲ್ಲಿ ಕನಿಷ್ಟ 6 ಮಂದಿ ಹಾಗೂ ನಗರ ಪ್ರದೇಶದಲ್ಲಿ ಕನಿಷ್ಟ 10 ಮಂದಿ ಪ್ರಾಥಮಿಕ ಸೋಂಕಿತರನ್ನು ಗುರುತಿಸಿ, ಅವರ ಮೇಲೆ ನಿಗಾ ಇರಿಸಬೇಕು. ಕೊವಿಡ್ ಕೇರ್ ಸೆಂಟರ್​ನಲ್ಲಿ ನಿಯೋಜಿಸಲಾಗಿರುವ ಆಯುರ್ವೇದಿಕ್ ವೈದ್ಯರು ಕರ್ತವ್ಯಕ್ಕೆ ತೆರಳಲು ಹಿಂದೇಟು ಹಾಕಿದರೆ ಕ್ರಮ ಕೈಗೊಳ್ಳಲಾಗುವುದು. ಅನಧಿಕೃತವಾಗಿ ರಜೆ ಹಾಕಿರುವ ವೈದ್ಯರಿಗೆ ನೊಟೀಸು ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES