Friday, December 27, 2024

ಅಷ್ಟಕ್ಕೂ ಕಲಂ 370, 35(ಎ)ರ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಸವಲತ್ತುಗಳೇನು? ಅದರ ಇತಿಹಾಸವೇನು?

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370 ಹಾಗೂ 35 (ಎ ) ವಿಧಿಯನ್ನು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರದ್ದು ಮಾಡಲಾಗಿದೆ. ಹಾಗಾದ್ರೆ ಈ ಕಲಂ 370 ವಿಶೇಷತೆ ಏನು?. ಇದರ ಹಿಂದಿನ ಇತಿಹಾಸವೇನು ಅನ್ನೋದರ ಬಗ್ಗೆ ತಿಳಿದುಕೊಳ್ಳೋ ಅಗತ್ಯವಿದೆ. ಆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.
ಎಲ್ರಿಗೂ ಗೊತ್ತಿರುವಂತೆ 1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ಸ್ವತಂತ್ರ ರಾಷ್ಟ್ರಗಳಾಗಿ ವಿಭಜನೆಯಾದ್ವು. ಆಗ ಕಾಶ್ಮೀರದ ರಾಜ ಹರಿಸಿಂಗ್​ ಯಾವ ರಾಷ್ಟ್ರದ ಜೊತೆಗೂ ಸೇರದೆ ಸ್ವತಂತ್ರವಾಗಿ ಉಳಿಯುವ ನಿರ್ಧಾರವನ್ನು ಮಾಡ್ತಾರೆ. ನಂತರ ಪಾಕಿಸ್ತಾನ ಕಣಿವೆ ರಾಜ್ಯದ ಮೇಲೆ ಅಪ್ರಚೋದಿತ ದಾಳಿ ನಡೆಸಿತು. ಆ ವೇಳೆ ರಾಜ ಹರಿಸಿಂಗ್ ತಮ್ಮ ನೆರವಿಗೆ ಬನ್ನಿ ಅಂತ ಭಾರತ ಸರ್ಕಾರವನ್ನು ಕೇಳಿಕೊಳ್ತಾರೆ. ಆಮೇಲೆ ಭಾರತದೊಂದಿಗೆ ವಿಲೀನವಾಗಲು ಒಪ್ಪಿಕೊಳ್ತಾರೆ. ಆದರೆ, ಕೆಲವೊಂದು ಷರತ್ತುಗಳನ್ನು ಸರ್ಕಾರದ ಮುಂದಿಡ್ತಾರೆ.. ಆಗ ಜನ್ಮತಾಳಿದ್ದೇ ಈ ಕಲಂ 370..! ತದನಂತರ ಕಲಂ35ಎ ಅನ್ನು ಸೇರ್ಪಡೆ ಮಾಡಲಾಗುತ್ತೆ.
ಕಲಂ 370ರ ಪ್ರಕಾರ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಸವಲತ್ತುಗಳೇನು?
* ಈ ಕಲಂ 370ರ ಪ್ರಕಾರ ಜಮ್ಮು-ಕಾಶ್ಮೀರ ಭಾರತ ಗಣರಾಜ್ಯದ ಭಾಗವಾಗಿತ್ತು. ಆದ್ರೆ, ಭಾರತದ ಬೇರೆ ಯಾವುದೇ ರಾಜ್ಯಕ್ಕಿಲ್ಲದ ವಿಶೇಷ ಸ್ಥಾನಮಾನಗಳನ್ನ ಹೊಂದಿತ್ತು.
* ಕೇವಲ ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕ ಈ ಖಾತೆಗಳಿಗೆ ಸಂಬಂಧಿಸಿದಂತೆ ಮಾತ್ರವೇ ಕಣಿವೆ ರಾಜ್ಯಕ್ಕೆ ನಮ್ಮ ದೇಶದ ಕಾನೂನು ಮತ್ತು ಸಂವಿಧಾನ ಅನ್ವಯವಾಗ್ತಿತ್ತು. ಸಂವಿಧಾನದ ಎಲ್ಲಾ ವಿಧಿ-ವಿಧಾನಗಳನ್ನು ಅನುಷ್ಠಾನ ಮಾಡ್ಬೇಕು ಅಂದ್ರೆ ಜಮ್ಮು-ಕಾಶ್ಮೀರದ ಒಪ್ಪಿಗೆ ಬೇಕಿತ್ತು.
* ಜಮ್ಮು-ಕಾಶ್ಮೀರ ಭಾರತದೊಂದಿಗೆ ವಿಲೀನಗೊಳಿಸಬೇಕಂತ ರಾಜ್ಯ ಸರ್ಕಾರ ನಿರ್ಧರಿಸಿದ್ರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ವಿಧಾನಸಭೆ ಮುಂದೆ ಮಂಡಿಸ್ಬೇಕು. ವಿಧಾನಸಭೆ ಅನುಮೋದನೆ ನೀಡಿದ್ರೆ ಅದನ್ನು ಮಧ್ಯಂತರ ಅಧಿಕಾರ ಅಂತ ಪರಿಗಣಿಸಲಾಗುವುದು. ಅಂದ್ರೆ ವಿಲೀನಗೊಳಿಸೋ ಅಧಿಕಾರ ಆ ವಿಧಾನಸಭೆಗೂ ಇಲ್ಲ..!
* ರಾಷ್ಟ್ರಪತಿಗಳು 370 ವಿಧಿಯನ್ನು ರದ್ದುಗೊಳಿಸಿ ಭಾರತದೊಳಗೆ ಜಮ್ಮು-ಕಾಶ್ಮೀರವನ್ನು ವಿಲೀನಗೊಳಿಸೋದಕ್ಕೆ ಮುಂದಾದಾದರೂ ರಾಜ್ಯ ಸರ್ಕಾರದ ಶಿಫಾರಸ್ಸು ಅವಶ್ಯಕವಾಗಿತ್ತು.
ಈ ಎಲ್ಲಾ ಸವಲತ್ತುಗಳನ್ನು ಕಲಂ 370ರ ಅಡಿಯಲ್ಲಿ ನೀಡಲಾಗಿತ್ತು. ಈ ಸವಲತ್ತುಗಳಲ್ಲದೆ ಕಲಂ 35 (ಎ) ಅಡಿಯಲ್ಲೂ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
35ಎ ಏನು?
* 35 (ಎ) ಪ್ರಕಾರ ಭಾರತ ಸರ್ಕಾರದ ಕೆಲ ಕಾಯ್ದೆಗಳು ಕಣಿವೆ ರಾಜ್ಯಕ್ಕೆ ಸಂಬಂಧಿಸಿರಲಿಲ್ಲ.
* ಕಾಶ್ಮೀರದ ಮೂಲ ನಿವಾಸಿಗಳ ಹೊರತಾಗಿ ಬೇರೆ ಯಾರೂ ಈ ಕಣಿವೆ ರಾಜ್ಯದಲ್ಲಿ ಸ್ಥಿರಾಸ್ತಿ, ಚರಾಸ್ತಿಗಳನ್ನು ಹೊಂದುವ ಹಕ್ಕಿರಲಿಲ್ಲ. ಅಷ್ಟೇ ಅಲ್ಲದೆ ಹೊರ ರಾಜ್ಯದವರು ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸುವಂತಿರಲಿಲ್ಲ.
* ಅಷ್ಟೇ ಅಲ್ದೆ ಹೊರ ರಾಜ್ಯದ ವಿದ್ಯಾರ್ಥಿಗಳು ಜಮ್ಮು-ಕಾಶ್ಮೀರ ಸರ್ಕಾರ ನಡೆಸೋ ವೃತ್ತಿಪರ ಕೋರ್ಸ್ ಮತ್ತು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವಂತಿರ್ಲಿಲ್ಲ. ಅದಲ್ಲದೆ ಸರ್ಕಾರದ ವಿದ್ಯಾರ್ಥಿ ವೇತನ ಪಡೆಯುವಂತಿರಲಿಲ್ಲ.
* ರಾಜ್ಯ ಸರ್ಕಾರದ ಹುದ್ದೆಗಳಲ್ಲಿ ಬೇರೆ ರಾಜ್ಯದವರಿಗೆ ಅವಕಾಶವಿರ್ಲಿಲ್ಲ.
* ಬೇರೆ ರಾಜ್ಯದವರು ಅಲ್ಲಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಹೀಗೆ ಕಲಂ 370 ಮತ್ತು 35 (ಎ) ಅನ್ವಯ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಕಾಶ್ಮೀರ ಮಾತ್ರವಲ್ಲದೆ 371(ಎ) ವಿಧಿಯ ಅಡಿಯಲ್ಲಿ ನಾಗಾಲ್ಯಾಂಡ್​, 371 (ಜಿ) ವಿಧಿಯಡಿಯಲ್ಲಿ ಮಿಜೋರಾಂಗಳಿಗೂ ಇಂಥಾ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ. ಆ ರಾಜ್ಯಗಳಿಗಿರೋ ಇತಿಹಾಸವೇ ವಿಶೇಷ ಸೌಲಭ್ಯಗಳಿಗೆ ಕಾರಣ. ಆದರೆ, ಜಮ್ಮು-ಕಾಶ್ಮೀರದಲ್ಲಿ ಪದೇ ಪದೇ ಜನಸಾಮಾನ್ಯರು ಮತ್ತು ಗಡಿ ಭದ್ರತಾಪಡೆಗಳ ನಡುವೆ ಚಕಮಕಿ ಆಗ್ತಾನೇ ಇರುತ್ತೆ. ಈ ಹಿನ್ನೆಲೆಯಲ್ಲಿ ಕಲಂ 370, 35 (ಎ)ಗೆ ತಿದ್ದುಪಡಿ ತರ್ಬೇಕು ಅನ್ನೋ ಕೂಗು ಕೇಳಿ ಬರ್ತಾ ಇತ್ತು

RELATED ARTICLES

Related Articles

TRENDING ARTICLES