Sunday, January 19, 2025

ಪ್ರವೀಣ್​​ ಹತ್ಯೆ ಬಿಜೆಪಿ ದುರಾಡಳಿತದ ಫಲ: ಸಂತೋಷ್ ಬಜಾಲ್

ಮಂಗಳೂರು: ಬಿಜೆಪಿ ಯುವಮೋರ್ಚಾದ ದಕ್ಷಿಣ ಕನ್ನಡ‌ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಮತೀಯವಾದಿ ನೀತಿಗಳೇ ನೇರ ಕಾರಣ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆರೋಪಿಸಿದೆ.

‘ಬಿಜೆಪಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಪೂರ್ತಿ ಕುಸಿದಿದೆ. ಕೋಮುವಾದಿ ಸಂಘಟನೆಗಳು ಅಂಕೆ ಮೀರಿ ವರ್ತಿಸುತ್ತಿವೆ. ಬೆಳ್ಳಾರೆಯಲ್ಲಿ ನಡೆದಿರುವ ಮಸೂದ್ ಹಾಗೂ ಪ್ರವೀಣ್ ನೆಟ್ಟಾರು ಅವರ ಕೊಲೆಗಳು ಮತೀಯ ಸಂಘರ್ಷ ಭುಗಿಳೇಲುವ ಭೀತಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಈಗಲಾದರೂ ಎಚ್ಚೆತ್ತುಕೊಂಡು ತಮ್ಮ ಪರಿವಾರವೂ ಸೇರಿದಂತೆ ಕೋಮುವಾದಿ ಸಂಘಟನೆಗಳಿಗೆ ಕಡಿವಾಣ ಹಾಕಬೇಕು ಎಂದರು.

ಹಿಂದು ಮುಸ್ಲಿಮರ ಮಧ್ಯೆ ತಾರತಮ್ಯ ಎಸಗದೇ ಕೊಲೆಗೀಡಾದ ಮಸೂದ್ ಹಾಗೂ ಪ್ರವೀಣ್ ಇಬ್ಬರ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಬೇಕು ಹಾಗೂ ಸಮಾನವಾಗಿ ಪರಿಹಾರ ಘೋಷಿಸಬೇಕು’ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಸಂತೋಷ್ ಬಜಾಲ್ ಒತ್ತಾಯಿಸಿದ್ದಾರೆ.

ಚುನಾವಣೆ ಹತ್ತಿರ ಬರುವಾಗ ಕರಾವಳಿ ಜಿಲ್ಲೆಗಳಲ್ಲಿ ಧರ್ಮಾಧಾರಿತ ಕೊಲೆಗಳು ನಡೆಯುತ್ತವೆ ಎಂಬ ಜನ ಸಾಮಾನ್ಯರ ಆತಂಕ ಮತ್ತೊಮ್ಮೆ ನಿಜವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬೆಳ್ಳಾರೆಯಲ್ಲಿ ವಾರದ ಅಂತರದಲ್ಲಿ ನಡೆದಿರುವ ಎರಡು ಕೊಲೆಗಳು ನಾಗರಿಕ ಸಮಾಜ ತತ್ತರಿಸುವಂತೆ ಮಾಡಿವೆ. ಬೆಳ್ಳಾರೆಯ ಮುಸ್ಲಿಂ ಯುವಕ ಮಸೂದ್ ಕೊಲೆ ಬಿಜೆಪಿ ಬೆಂಬಲಿತರಿಂದ ನಡೆದಾಗ ಸ್ಥಳೀಯ ಶಾಸಕರು ಸರಿಯಾಗಿ ಸ್ಪಂದಿಸಲಿಲ್ಲ. ಸರ್ಕಾರವೂ ತಾತ್ಸಾರದ ಮನೋಭಾವ ತೋರ್ಪಡಿಸಿತ್ತು. ಕೋಮು ದ್ವೇಷದ ಕೊಲೆಯಾಗಿದ್ದರೂ ನಿಯಮದಂತೆ ಪರಿಹಾರ ನೀಡಲಿಲ್ಲ. ಸ್ಥಳೀಯ ಶಾಸಕರು ಹತ್ಯೆಗೀಡಾದ ಮಸೂದ್ ಅವರ ವಿಧವೆ ತಾಯಿಗೆ ಕನಿಷ್ಟ ಸಾಂತ್ವನವನ್ನು ನೀಡದಿರುವುದು ಬಹುದೊಡ್ಡ ಆಡಳಿತ ಲೋಪ. ಇಂತಹ ಕೊಲೆಗಳು ನಡೆದಾಗ ವ್ಯವಸ್ಥೆ, ನಾಗರಿಕ ಸಮಾಜ ಒಕ್ಕೊರಲಿನಿಂದ ಖಂಡಿಸಿದಾಗ ಮತೀಯವಾದಿಗಳ ಚಟುವಟಿಕೆ ಮೊಣಚು ಕಳೆದುಕೊಳ್ಳುತ್ತದೆ. ಆದರೆ, ಸರ್ಕಾರವೇ ಮುಂದೆ ನಿಂತು ಇಂತಹ ಸಂದರ್ಭದಲ್ಲಿ ತಾರತಮ್ಯ ಮಾಡುವುದು ಬೇಸರದ ವಿಷಯ.
ನರಗುಂದದ ಸಮೀರ್, ಶಿವಮೊಗ್ಗದ ಹರ್ಷ ಕೊಲೆಯ ಸಂದರ್ಭವೂ ಈ ತಾರತಮ್ಯದ ರಾಜಕಾರಣ ಎದ್ದು ಕಂಡಿತ್ತು. ಅಲ್ಪಸಂಖ್ಯಾತರಿಗೆ ವ್ಯಾಪಾರ ಬಹಿಷ್ಕಾರದಂತಹ ಬಲಪಂಥೀಯ ಅಭಿಯಾನದ ಸಂದರ್ಭವೂ ಬಿಜೆಪಿ ಸರ್ಕಾರ ಮೌನ ಬೆಂಬಲದ ಮೂಲಕ ಕರ್ನಾಟಕದ ಸೌಹಾರ್ದ ಪರಂಪರೆಗೆ ಆಳವಾದ ಗಾಯ ಉಂಟು ಮಾಡಿತು. ಆ ಮೂಲಕ ಸರಕಾರದ ಭ್ರಷ್ಟಾಚಾರ, ಬೆಲೆಯೇರಿಕೆ ಮುಂತಾದ ವೈಫಲ್ಯಗಳು ಮರೆ ಮಾಚುವ ಯತ್ನವನ್ನು ಯೋಜನಾಬದ್ದವಾಗಿ ನಡೆಸಲಾಯಿತು. ಅದರ ಪರಿಣಾಮವಾಗಿ ಅಮಾಯಕ ಯುವಕರು ಅನ್ಯಾಯವಾಗಿ ಕೊಲೆಗೀಡಾಗುವ, ಪೋಷಕರು ತಬ್ಬಲಿಗಳಾಗುವ ದುಸ್ಥಿತಿ ನಿರ್ಮಾಣವಾಗಿದೆ’ ಎಂದು ಅವರು ದೂರಿದ್ದಾರೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈಗಲಾದರು ಎಚ್ಚೆತ್ತುಕೊಂಡು ರಾಜಧರ್ಮ ಪಾಲನೆ ಮಾಡಬೇಕು. ಎಲ್ಲಾ ಬಗೆಯ ಮತೀಯವಾದಿ ಶಕ್ತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಜರುಗಿಸಬೇಕು. ದಕ್ಷ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ನೇಮಿಸಿ ಪ್ರವೀಣ್ ನೆಟ್ಟಾರು ಕೊಲೆಯ ಹಿಂದಿರುವ ಎಲ್ಲಾ ಶಕ್ತಿಗಳನ್ನು ಬಯಲಿಗೆಳೆಯಬೇಕು. ಮುಖ್ಯಮಂತ್ರಿಯವರು ಬೆಳ್ಳಾರೆಗೆ ಆಗಮಿಸಿ ಮೃತ ಮಸೂದ್ ಹಾಗೂ ಪ್ರವೀಣ್ ನೆಟ್ಟಾರು ಅವರ ಕುಟುಂಬಗಳಿಗೆ ಸಾಂತ್ವನ ಹೇಳಬೇಕು‌. ತಾರತಮ್ಯವಿಲ್ಲದೆ ಪರಿಹಾರ ಧನ ಒದಗಿಸಬೇಕು ಆ ಮೂಲಕ ಜನತೆಗೆ ಧೈರ್ಯ ತುಂಬುವ, ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡುವ ಕೆಲಸ ಆಗಬೇಕು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಭಾಕರ ಭಟ್ ಕಾರಿಗೂ ಮುತ್ತಿಗೆ: ಪ್ರವೀಣ್ ನೆಟ್ಟಾರು ಅವರ ಅಂತಿಮ ದರ್ಶನಕ್ಕೆ ಬಂದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಕಾರಿಗೆ ಸಂಘಪರಿವಾರದ ಸಂಘಟನೆಗಳ ಕಾರ್ಯಕರ್ತರು ತಡೆ ಒಡ್ಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

RELATED ARTICLES

Related Articles

TRENDING ARTICLES