ಬೆಂಗಳೂರು : ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹತ್ತಿರವಾದ್ರೂ ,ಕಾಂಗ್ರೆಸ್ ಪಕ್ಷದಲ್ಲಿರುವ ಬಣ ಬಡಿದಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಸಿದ್ದರಾಮೋತ್ಸವ ಆಚರಣೆ ಮೂಲಕ ಟಗರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿರೋದು ಬಂಡೆ ಬಣಕ್ಕೆ ಸಹಿಸಿಕೊಳ್ಳೋದಕ್ಕೆ ಸಾಧ್ಯವಾಗ್ತಿಲ್ಲ. ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡಿ ಎನ್ನುತ್ತಲ್ಲೇ ಸಿದ್ದು ಬಣದ ಮೇಲೆ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಕೆಂಡ ಕಾರುತ್ತಿದ್ದಾರೆ.
ಸಿದ್ದರಾಮೋತ್ಸವ ಆಚರಣೆ ಮಾಡುತ್ತಿದ್ದು, ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸಿದ್ದು ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರು ಡಿ.ಕೆ.ಶಿವಕುಮಾರ್‌ಗೆ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ.
ಆಗಸ್ಟ್ 3 ರಂದು ನಡೆಯುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಹಿನ್ನಲೆ ಆಗಸ್ಟ್ 2 ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಆಗಸ್ಟ್ 3ರ ಬೆಳಿಗ್ಗೆ , ರಾಜ್ಯ ಕಾಂಗ್ರೆಸ್‌ನಿಂದ ಕೆಲ ಕಾರ್ಯಕ್ರಮ ನಿಗದಿಯಾಗಿದೆ. ಪಕ್ಷದಿಂದ ನಿಗದಿಯಾಗಿರುವ ಕಾರ್ಯಕ್ರಮ ವಿಚಾರದಲ್ಲಿ ಸಿದ್ದು ಬಣದಿಂದ ಆಕ್ಷೇಪ ವ್ಯಕ್ತವಾಗಿದೆ ಎನ್ನಲಾಗಿದೆ. ಪಕ್ಷದಿಂದ ನಿಗದಿಯಾಗಿರುವ ಕಾರ್ಯಕ್ರಮಕ್ಕೆ, ರಾಹುಲ್ ಗಾಂಧಿ ಓಡಾಡಬೇಕಿದ್ದ ಹೆಲಿಕಾಪ್ಟರ್ ಬುಕಿಂಗ್ ವಿಚಾರದಲ್ಲಿ ಇದೀಗ ಅಸಮಾಧಾನ ಸ್ಪೋಟವಾಗಿದೆ.
ಇನ್ನು ಆಗಸ್ಟ್ 2ರ ರಾತ್ರಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ. ಆಗಸ್ಟ್ 3ರ ಬೆಳಿಗ್ಗೆ ಚಿತ್ರದುರ್ಗ ಮುರುಘಮಠ ಸೇರಿ ಬೇರೆ ಬೇರೆ ಮಠಗಳಿಗೆ ಹೋಗುವ ಕಾರ್ಯಕ್ರಮ ಕೆಪಿಸಿಸಿಯಿಂದ ನಿಗದಿಯಾಗಿದೆ. ದೆಹಲಿಯಿಂದ ಹುಬ್ಬಳ್ಳಿಗೆ ಬರಬೇಕಾದ ಹೆಲಿಕಾಪ್ಟರ್‌ನ್ನು ಅಮೃತ ಮಹೋತ್ಸವ ಸಮಿತಿ ಬುಕ್ ಮಾಡಿದೆ. ಆದ್ರೆ, ಹುಬ್ಬಳ್ಳಿಯಿಂದ ಚಿತ್ರದುರ್ಗ, ಚಿತ್ರದುರ್ಗದಿಂದ ದಾವಣಗೆರೆಗೆ ವಿಶೇಷ ಹೆಲಿಕಾಪ್ಟರ್‌ನ್ನು ಅಮೃತ ಮಹೋತ್ಸವ ಸಮಿತಿ ಬುಕ್ ಮಾಡಿಲ್ಲ. ಹೀಗಾಗಿ ಸಮಿತಿ ಪದಾಧಿಕಾರಿಗಳ ಮೇಲೆ ಗರಂ ಆಗಿರುವ ಕನಕಪುರ ಬಂಡೆ, ಚುನಾವಣಾ ವರ್ಷದಲ್ಲಿ ರಾಹುಲ್ ಗಾಂಧಿ ಬರ್ತೀದ್ದಾರೆ. ಅವರ ಸಮಯವನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ನಿಮಗೆ ಆದ್ರೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿ. ಇಲ್ಲದ್ದಿದ್ರೆ ನಾನೇ ಹೆಲಿಕಾಪ್ಟರ್ ವ್ಯವಸ್ಥೆ ಮಾಡುತ್ತೇನೆ ಎಂದು ಗುಡುಗಿದ್ದಾರೆ. ಚಿತ್ರದುರ್ಗಕ್ಕೆ ರಾಹುಲ್ ಗಾಂಧಿ ತೆರಳಿದ್ರೆ ಕಾರ್ಯಕ್ರಮ ಶುರು ಆಗಲು ತಡವಾಗುತ್ತೆ ಅನ್ನೋ ಅಭಿಪ್ರಾಯ ಸಮಿತಿಗೆ ಇದೆ. ಮಠಾಧೀಶರ ಭೇಟಿ ತಪ್ಪಿಸಲು ಸಿದ್ದು ಬಣ ಮಾಸ್ಟರ್ ಪ್ಲಾನ್ ಮಾಡಿದೆ ಎನ್ನಲಾಗಿದೆ. ಹೀಗಾಗಿಯೇ, ಹೆಲಿಕಾಪ್ಟರ್ ಬುಕ್ ಮಾಡಲು ಅಮೃತ ಮಹೋತ್ಸವ ಸಮಿತಿ ಹಿಂದೇಟು ಹಾಕಿದೆ ಎನ್ನಲಾಗಿದೆ.
ಇನ್ನು ಆಗಸ್ಟ್ 2 ರಂದು ಹುಬ್ಬಳ್ಳಿಗೆ ಆಗಮಿಸುತ್ತಿರುವ ಕಾಂಗ್ರೆಸ್ ಯುವರಾಜ , ಹಿರಿಯ ನಾಯಕರ ಜೊತೆ ಸಭೆ ಮಾಡಲಿದ್ದಾರೆ. ಸಿಎಂ ಸ್ಥಾನಕ್ಕಾಗಿ ದಿನೇ ದಿನೇ ಹೆಚ್ಚುತ್ತಿರುವ ಬಣ ಬಡಿದಾಟಕ್ಕೂ ಬ್ರೇಕ್ ಹಾಕಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಹೀಗಾಗಿ, ರಾಜಕೀಯ ವ್ಯವಹಾರಗಳ ಸಮಿತಿ ಸಭೆಯನ್ನು ರಾಹುಲ್ ಗಾಂಧಿ ಕರೆದಿದ್ದಾರೆ. ಪ್ರಸ್ತುತ ರಾಜ್ಯ ರಾಜಕೀಯ ಬೆಳವಣಿಗೆ ಹಾಗೂ ಪಕ್ಷದ ಆಂತರಿಕ ಕಚ್ಚಾಟದ ಬಗ್ಗೆ ಸಭೆ ಯಲ್ಲಿ ಚರ್ಚೆಯಾಗಲಿದೆ.ಸಭೆಯಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಎಂಬಿ ಪಾಟೀಲ್
ಬಿ.ಕೆ.ಹರಿಪ್ರಸಾದ್,ಕೆ.ಹೆಚ್.ಮುನಿಯಪ್ಪ ಸೇರಿ ಹಿರಿಯ ನಾಯಕರು ಭಾಗಿಯಾಗಲಿದ್ದಾರೆ. ಇನ್ನು ಐದು ವಲಯವಾರು ರಚನೆಯಾಗಿರುವ ಸಮಿತಿಗೂ ವರದಿ ನೀಡುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಉಸ್ತುವಾರಿಗಳು ನೀಡುವ ವರದಿ ಮೇಲೆ ಗಂಭೀರ ಚರ್ಚೆಯಾಗುವ ಸಾಧ್ಯತೆ ಇದೆ. ಈ ಮೂಲಕ ಪಕ್ಷದಲ್ಲಿರುವ ಆಂತರಿಕ ಕಲಹಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನ ಪಡುತ್ತಿದೆ.
ಇನ್ನು ರಾಜ್ಯ ಕಾಂಗ್ರೆಸ್, ಹಲವು ಸಮೀಕ್ಷೆ ಮಾಡಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಎಂದು ಮಾಹಿತಿ ಬಂದಿದೆ. ಆದ್ರೆ ಕಾಂಗ್ರೆಸ್ ಪಕ್ಷದ ಬಣ ಬಡಿದಾಟವೇ,ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ದೊಡ್ಡ ತಲೆ ನೋವಾಗಿದೆ. ಪಕ್ಷದಲ್ಲಿ ಎದ್ದಿರುವ ಆಂತರಿಕ ಕಚ್ಚಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗ್ತಿಲ್ಲ. ಪಕ್ಷದಲ್ಲಿನ ಆಂತರಿಕ ತಿಕ್ಕಾಟವನ್ನು ಬಗೆಹರಿಸೋದೇ ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ಸವಾಲಾಗಿದೆ.
ಗೋವಿಂದ್, ಪೊಲಿಟಿಕಲ್ ಬ್ಯುರೋ,ಪವರ್ ಟಿವಿ