ಮಂಡ್ಯ: ಇಂದು ಕೇಬಲ್ ನೆಟ್ವರ್ಕ್ ಕಟ್ ಮಾಡಿದ್ದಾರೆ ಎಂಬುದು ತಿಳಿದು ಬಂತು. ಕೇಬಲ್ ಕಟ್ ಮಾಡಿಸಬಹುದು. ಆದರೆ ಜನರ ಈ ಪ್ರೀತಿ ಇದೆಯಲ್ಲಾ ಇದನ್ನು ಕಟ್ ಮಾಡಿ ತೋರಿಸಲಿ. ರಾಜಕೀಯ ನನಗೆ ಹೊಸ ಸವಾಲು. ಈ ಸವಾಲು ಕಷ್ಟ ನಿಜ. ಆದರೆ ನೀವು ನನ್ನೊಂದಿಗೆ ಕೈಜೋಡಿಸಿದರೆ ಅಸಾಧ್ಯವಾದದ್ದೇನೂ ಅಲ್ಲ. ನೀವು ನನ್ನ ಜೊತೆಗಿರ್ತೀರಿ ಅನ್ನೋ ಮಾತು ಕೊಡಿ. ಈ ಪ್ರೀತಿ ಬಿಟ್ಟು ನಾನೆಲ್ಲೂ ಹೋಗಲ್ಲ ಅಂತ ಮಂಡ್ಯ ಲೋಕಕಣದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ರು.
ನಾಮಪತ್ರ ಸಲ್ಲಿಸಿ ಬಳಿಕ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು ಮೊದಲಿಗೆ ಮಂಡ್ಯದ ಜನರಿಗೆ, ಅಭಿಮಾನಿಗಳಿಗೆ ಪ್ರೀತಿಯ ನಮಸ್ಕಾರ ಹೇಳಿದ್ರು. “ನಾನ್ಯಾರು ಅಂತ ಕೇಳುವವರಿಗೆ ನೀವೆಲ್ಲರೂ ಸರಿಯಾದ ಉತ್ತರ ಕೊಡಲಿದ್ದೀರಿ ಅಂತ ನನಗೆ ಗೊತ್ತು. ಕಾಂಗ್ರೆಸ್ ನಾಯಕರು ನನ್ನೊಂದಿಗೆ ಮಾತನಾಡಿ, ಅಂಬರೀಶ್ ಅವರು ಏನೇನು ಮಾಡಬೇಕೆಂದು ಕನಸುಗಳನ್ನು ಕಂಡಿದ್ರೋ ಅದನ್ನು ನನಸು ಮಾಡೋ ಕರ್ತವ್ಯ ನಿಮಗಿದೆ ಅಂತ ಹೇಳೋ ಮೂಲಕ ನನ್ನನ್ನು ಇಷ್ಟು ದೂರ ಕರೆದುಕೊಂಡು ಬಂದಿದ್ದೀರಿ ಎಂದರು.
ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಟಿಕೆಟ್ ನೀಡಲಾಗುವುದಿಲ್ಲ. ಇದು ಮೈತ್ರಿ ಧರ್ಮ ಅಂತ ಹೇಳಿ ಕಳುಹಿಸಿದ್ರು. ಮೈತ್ರಿ ಧರ್ಮವನ್ನು ಎಷ್ಟು ಪಾಲನೆಯಾಗ್ತಿದೆ ಅಂತ ನೀವೇ ಹೇಳ್ಬೇಕು. ರಾಜಕೀಯ ಪ್ರವೇಶದ ಬಗ್ಗೆ ನನ್ನ ನಿರ್ಧಾರವನ್ನು ತಿಳಿಸೋ ಮುಂಚೇನೇ ಮಾತುಗಳು ಬಾಣದಂತೆ ಬರೋಕೆ ಶುರು ಆಯ್ತು. ನಾನು ಇದ್ಯಾವುದಕ್ಕೂ ಉತ್ತರ ಕೊಡಲ್ಲ. ಇದಕ್ಕೆಲ್ಲ ಜನರು ಉತ್ತರ ಕೊಡ್ತಾರೆ. ಮುಂದಿನ ಸವಾಲಿಗೂ ನನ್ನ ಪರವಾಗಿ ನೀವೆ ಉತ್ತರಿಸಬೇಕು ಅನ್ನೋದು ನನ್ನ ಬಯಕೆ” ಅಂತ ಹೇಳಿದ್ದಾರೆ.
ಚಿತ್ರ ನಟರು ಸುಮಲತಾ ಬೆಂಬಲಕ್ಕೆ ನಿಂತಿರುವ ಕುರಿತು ಪ್ರತಿಕ್ರಿಯಿಸಿ, “ಇಲ್ಲಿ ಬಂದವರೆಲ್ಲ ಅಂಬರೀಶ್ ಅವರ ಪ್ರೀತಿ ಉಳಿಸಿಕೊಂಡವರು. ಯಶ್, ದರ್ಶನ್ ಅವರು ಮನೆ ಮಕ್ಕಳಾಗಿ ಬಂದಿದ್ದಾರೆ. ತಾಯಿಗಾಗಿ ಮಕ್ಕಳು ಬರೋದು ತಪ್ಪಾ ಅನ್ನೋದನ್ನು ನೀವೇ ಹೇಳಿ..? ಯಾರು ಏನೇನು ಮಾತುಗಳನ್ನು ಹೇಳಿದ್ದಾರೋ ಅವರ ಮಾತುಗಳು ಅಂಬರೀಶ್ ಅಭಿಮಾನಿಗಳಿಗೆ ನೋವನ್ನುಂಟು ಮಾಡ್ತಿದೆ ಅನ್ನೋದನ್ನು ಅವರು ಅರ್ಥ ಮಾಡಿಕೊಳ್ಳಬೇಕು” ಅಂತ ಹೇಳೀದ್ರು.
ಅಂಬರೀಶ್ ಅವರು ಮಂಡ್ಯಕ್ಕೆ ಮಾಡಿರೋದು ಶೂನ್ಯ ಅನ್ನೋ ಮಾತಿನ ಕುರಿತು ಪ್ರತಿಕ್ರಿಯಿಸಿ, “ನಾಡಿನ ರೈತರು ಕಷ್ಟದಲ್ಲಿದ್ದಾಗ ಸ್ಥಾನ ಬೇಡ ಅಂತ ಬಿಟ್ಟು ಬಂದವರು ಅಂಬರೀಶ್. ಅಂಬರೀಶ್ ಅವರು ಇನ್ನೆರಡು ವರ್ಷ ಅಧಿಕಾರದಲ್ಲಿದ್ರೆ ಏನೇನು ಮಾಡ್ಬೇಕು ಅಂತಿದ್ರೋ, ಅವರಿದ್ದಿದ್ರೆ ಏನೇನು ಮಾಡ್ತಿದ್ರು ಅನ್ನೋದು ನಂಗೆ ಗೊತ್ತಿದೆ. ಇವತ್ತು ಅಂಬರೀಶ್ ಪರವಾಗಿ ನಾನು ಕರ್ತವ್ಯ ನಿರ್ವಹಿಸ್ಕೊಂಡು ಹೋಗಲು ಬಂದಿದ್ದೇನೆ. ನಾನು ಸ್ಪರ್ಧೆ ಮಾಡ್ತಿರೋದು, ಸವಾಲು ಮಾಡೋದಕ್ಕೂ ಅಲ್ಲ, ವಿರೋಧಿಸೋದಿಕ್ಕೂ ಅಲ್ಲ. ನಾನು ಇವತ್ತು ಹೋರಾಟ ಮಾಡ್ಬೇಕಾಗಿರೋದು ಈ ಜನಕ್ಕೋಸ್ಕರ. ನನ್ನ ಪರ ನೀವಿದ್ರೆ, ನಿಮ್ಮ ಪರ ನಾನಿರ್ತೇನೆ. ಇಷ್ಟು ಪ್ರೀತಿ ತೋರಿಸೋ ನಿಮ್ಮನ್ನು ಬಿಟ್ಟು ಹೋದ್ರೆ ಅವರ ಪತ್ನಿ ಅನ್ನೋ ಅರ್ಹತೆ ನನಗಿರಲ್ಲ” ಅಂತ ಹೇಳಿದ್ರು.