ಬೆಂಗಳೂರು: ಲೋಕಸಭಾ ಚುನಾವಣೆ ಡೇಟ್ ಫಿಕ್ಸ್ ಆಗಿದ್ದು, ಪ್ರಚಾರ ಕಾರ್ಯವೂ, ಸಭೆಗಳೂ, ಸೀಟು ಹಂಚಿಕೆಯ ಕೆಲಸಗಳು ಭರದಿಂದ ಸಾಗಿದೆ. ಈ ಹಿನ್ನೆಲೆ ಮೈತ್ರಿ ಸರ್ಕಾರದ ಪ್ರಮುಖರು ಅಶೋಕ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು “ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅನುಮತಿಯೊಂದಿಗೆ ಮಾರ್ಚ್ 31ರಂದು ಬೃಹತ್ ಸಮಾವೇಶ ನಡೆಸಲಾಗುತ್ತದೆ. ರಾಹುಲ್ ಗಾಂಧಿ ಅವರು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿಯಾಗಿ ಪ್ರಚಾರ ಕಾರ್ಯ ನಡೆಸಲಿದ್ದು, ಒಟ್ಟಿಗೆ ಶಕ್ತಿ ಪ್ರದರ್ಶನ ನಡೆಸಲಿವೆ. 28 ಕ್ಷೇತ್ರಗಳಲ್ಲಿ ದೋಸ್ತಿ ನಾಯಕರು ಗೆಲುವನ್ನು ಪಡೆಯಲಿದ್ದಾರೆ. ಒಟ್ಟು 28 ಕ್ಷೇತ್ರಗಳಲ್ಲಿ 8ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳೂ, 20ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರು ಸ್ಪರ್ಧಿಸಲಿದ್ದಾರೆ” ಅಂತ ಹೇಳಿದ್ದಾರೆ.
ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ. ಶಿವಕುಮಾರ್ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.