ಮಂಡ್ಯ : ‘ನಿಮ್ಮ ತಾತ ರಿಟೈರ್ಡ್ ಆಗಲೇ ಇಲ್ಲ. ನಾನು, ನಿಮ್ಮ ತಾತ ಇಬ್ಬರೂ ಒಟ್ಟಿಗೆ ಪಾರ್ಲಿಮೆಂಟ್‌ಗೆ ಹೋಗಿದ್ವಿ. ನಾನು ರಿಟೈರ್ಡ್ ಆಗಿ ತುಂಬಾ ವರ್ಷ ಆಯ್ತು. ನಿಮ್ಮ ತಾತ ಇನ್ನೂ ರಿಟೈರ್ಡ್ ಆಗಲೇ ಇಲ್ಲ. ಇನ್ನು ಎಲೆಕ್ಷನ್‌ಗೆ ನಿಲ್ಲುತ್ತಲೇ ಇದ್ದಾನೆ’..! – ಇದು ಮಾಜಿ ಸಚಿವ ಜಿ.ಮಾದೇಗೌಡ ಮೈತ್ರಿ ಅಭ್ಯರ್ಥಿ ನಿಖಿಲ್‌ಕುಮಾರಸ್ವಾಮಿ ಬಳಿ ಹೇಳಿದ ಮಾತು..!
ಚುನಾವಣೆಯಲ್ಲಿ ಬೆಂಬಲ ಕೋರಲು ಮಾದೇಗೌಡರನ್ನು ಭೇಟಿ ಮಾಡಿದ ನಿಖಿಲ್‌ಗೆ ತಮ್ಮ ಹೋರಾಟದ ಜೀವನದ ನೆನಪಿನ ಬುತ್ತಿ ಬಿಚ್ಚಿಟ್ಟ ಗೌಡರು, ನಡುವೆ ಈ ಪ್ರಶ್ನೆಗಳನ್ನೆಸೆದಾಗ ನಿಖಿಲ್ ಮೌನಕ್ಕೆ ಶರಣಾದರು. ಮಧ್ಯ ಪ್ರವೇಶಿಸಿದ ಸಂಸದ ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಂಠೇಗೌಡ ಅವರಿಗೆ ಇಷ್ಟವಿಲ್ಲ. ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಿಲ್ಲುತ್ತಿದ್ದಾರೆ ಎಂದರು.
ಇದಕ್ಕೂ ಮುನ್ನ ಗೌಡರು, ನಾನು ಸ್ವಾತಂತ್ರ್ಯಕ್ಕೆ ಹೋರಾಡಿ ಪೊಲೀಸರಿಂದ ಲಾಠಿ ಏಟು ತಿಂದಿದ್ದೇನೆ. ಪ್ರಸ್ತುತ ವ್ಯವಸ್ಥೆ ಹಾಳಾಗಿದೆ. ಹಿಂದೆ ಲಕ್ಷ ಕೊಟ್ಟರೂ ಸುಳ್ಳು ಹೇಳುತ್ತಿರಲಿಲ್ಲ. ಈಗ ಗುಮಾಸ್ತನಿಂದ ಹಿಡಿದು ಮಿನಿಸ್ಟರ್‌ವರೆಗೂ ಲಂಚಕ್ಕೆ ನಿಂತಿದ್ದಾರೆ. ಇಂದು ದುಡ್ಡಿಲ್ಲದೆ ಏನು ನಡೆಯಲ್ಲ, ಸುಳ್ಳು ಹೇಳದೇ ಏನು ನಡೆಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ರು.
ಹಿಂದಿನ ಕಾಲ ಚೆನ್ನಾಗಿತ್ತು. ನ್ಯಾಯವಿತ್ತು. ಸಕಾಲಕ್ಕೆ ಮಳೆ ಬೆಳೆ ಆಗುತ್ತಿತ್ತು. ಮಳೆ ಬಾರದಿದ್ದರೆ ಮಳೆರಾಯನನ್ನು ಮಾಡುತ್ತಿದ್ದರು. ಆಗ ಮಳೆಯಾಗುತ್ತಿತ್ತು. ಆ ರೀತಿ ಪ್ರಾಮಾಣಿಕವಾಗಿ ನಡೆಯಬೇಕೆಂದು ಸಲಹೆ ನೀಡಿ, ಆಶೀರ್ವದಿಸಿ, ಹೆದರಬೇಡ ಧೈರ್ಯವಾಗಿ ಹೋಗು, ಗುಡ್‌ಲಕ್ ಎಂದು ಹೇಳಿ ನಿಖಿಲ್ ಅವರನ್ನು ಕಳುಹಿಸಿಕೊಟ್ಟರು.
‘ಸುಮಲತಾ ಮನೆಗೆ ಬಂದಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾದರೆ, ಬೆಂಬಲ, ಇಲ್ಲದಿದ್ದರೆ ಬೆಂಬಲ ನೀಡಲ್ಲ ಎಂದು ಹೇಳಿದ್ದೇನೆ’ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು ಮಾದೇಗೌಡ್ರು.
ಶಾಸಕಿ ಅನಿತಾ ಕುಮಾರಸ್ವಾಮಿ, ಸಂಸದ ಶಿವರಾಮೇಗೌಡ, ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ಅಪ್ಪಾಜಿಗೌಡ ಮೊದಲಾದವರು ಈ ಸಂದರ್ಭದಲ್ಲಿದ್ದರು.