ತಾನು ಯಾರಿಗೂ ಹೆದರುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳುವ ಮೂಲಕ ತಮ್ಮದೇ ಪಕ್ಷದ ನಾಯಕರಿಗೆ ಟಾಂಗ್ ನೀಡಿದರು.
ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ಗಲಾಟೆಗಳು ಹಾಗೂ ತಮಗೆ ಬೆಂಬಲವನ್ನು ಹೆಚ್ಚಿಸುವುದರ ಬಗ್ಗೆ ವಿಚಲಿತರಾಗದೇ ಮಲಬಾರ್ ಪ್ರವಾಸದಲ್ಲಿರುವ ಶಶಿ ತರೂರ್‌ಗೆ ಪಕ್ಷದೊಳಗೆ ವಿರೋಧವಿದ್ದರೂ, ಜನರು ಭಾರೀ ಬೆಂಬಲವನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ, ತಮ್ಮ ಪಕ್ಷದ ನೇತೃತ್ವದ ಯುಡಿಎಫ್ ಮಿತ್ರಪಕ್ಷ ಐಯುಎಂಎಲ್‍ನ ಹಿರಿಯ ನಾಯಕರನ್ನು ಭೇಟಿ ಮಾಡಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‍ನಲ್ಲಿ ಯಾವುದೇ ಗುಂಪು ರಚಿಸಲು ಆಸಕ್ತಿ ಇಲ್ಲ ಎಂದು ಹೇಳಿದರು. ಕೇರಳ ರಾಜ್ಯದಲ್ಲಿ ತಮ್ಮ ಪಕ್ಷದಲ್ಲಿ ನಡೆಯುತ್ತಿರುವ ಕ್ರಮಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಸ್ಪರ್ಧಾಮನೋಭಾವದಿಂದ ಈ ವಿಷಯಗಳನ್ನು ತೆಗೆದುಕೊಳ್ಳಲು ಬಯಸುತ್ತೇನೆ. ಕೆಲವರು ನನ್ನನ್ನು ಪಕ್ಕದ ಬೆಂಚ್‍ನಲ್ಲಿ ಕುಳಿತುಕೊಳ್ಳಲು ಬಯಸಿದ್ದರು. ಆದರೆ ನಾನು ಮುಂದೆ ಆಡಲು ಬಯಸುತ್ತೇನೆ ಎಂದು ಸ್ವಪಕ್ಷದ ಕೆಲವು ನಾಯಕರಿಗೆ ತಿರುಗೇಟು ನೀಡಿದರು.
ಮೂಲಗಳ ಪ್ರಕಾರ ಶಶಿ ತರೂರ್ ಉತ್ತರ ಕೇರಳಕ್ಕೆ ಭೇಟಿ ನೀಡುವುದಾಗಿ ಘೋಷಿಸಿದ ನಂತರ ಕೇರಳ ಕಾಂಗ್ರೆಸ್‍ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ರಾಜ್ಯ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಲು ಅವರ ಪ್ರಯತ್ನವೆಂದು ಹೇಳಲಾಗುತ್ತಿದೆ.