ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾನ ಪೊಲೀಸ್ ಕಸ್ಟಡಿಯನ್ನು ಇನ್ನೂ 4 ದಿನಗಳವರೆಗೆ ವಿಸ್ತರಿಸಲಾಗಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ದೆಹಲಿಯ ಸಾಕೇತ್ ನ್ಯಾಯಾಲಯವು ಅಫ್ತಾಬ್ ಪೂನಾವಾಲಾನ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಿದೆ. ಮೂಲಗಳ ಪ್ರಕಾರ, ಅಫ್ತಾಬ್ ಪೂನಾವಾಲಾ ಶ್ರದ್ಧಾಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ನಾನು ಕೋಪದ ಭರದಲ್ಲಿ ಈ ಕೊಲೆ ಮಾಡಿದೆ ಎಂದು ಹೇಳಿದ್ದಾನೆ.
ಶ್ರದ್ಧಾ ವಾಲ್ಕರ್ ಅವರನ್ನು 28 ವರ್ಷದ ಅಫ್ತಾಬ್ ಪೂನಾವಾಲಾ ಕೊಲೆ ಮಾಡಿದ್ದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೇಹದ ಭಾಗಗಳನ್ನು ಮಧ್ಯರಾತ್ರಿಯ ನಂತರ ನಗರದಾದ್ಯಂತ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರದ್ಧಾಳನ್ನು ಕೊಂದು, ಕತ್ತರಿಸಿದ ಆರೋಪಿ ಅಫ್ತಾಬ್ ಪೂನಾವಾಲಾನ ಪಾಲಿಗ್ರಾಫ್ ಪರೀಕ್ಷೆಯನ್ನು ದೆಹಲಿ ಪೊಲೀಸರು ಇಂದು ನಡೆಸುವ ಸಾಧ್ಯತೆಯಿದೆ.ಕೊಲೆಯ ಆಯುಧ, ಶ್ರದ್ಧಾಳ ತಲೆಬುರುಡೆ, ಬಟ್ಟೆ ಮತ್ತು ಫೋನ್ ಅನ್ನು ವಶಪಡಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಇಲ್ಲಿಯವರೆಗೆ ಪೊಲೀಸರು ಕೆಲವು ಮೂಳೆಗಳನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ. ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಅಫ್ತಾಬ್‌ನನ್ನು ಮಂಗಳವಾರ ಮತ್ತೆ ವೀಡಿಯೊಗ್ರಫಿ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.