ಮಧ್ಯ ಕೊಲಂಬಿಯಾದ ಮೆಡೆಲಿನ್ ನಗರದ ಸಮೀಪ, ಚೋಕೋದ ಪಶ್ಚಿಮ ವಿಭಾಗಕ್ಕೆ ಪ್ರಯಾಣಿಸುತ್ತಿದ್ದ ಸಣ್ಣ ವಿಮಾನವೊಂದು ಸೋಮವಾರ ಪತನಗೊಂಡಿದೆ. ದುರ್ಘಟನೆಯಲ್ಲಿ 8 ಮಂದಿ ಸಾವನಪ್ಪಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಒಲಯಾ ಹೆರೆರಾ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ನಂತರ ವಿಮಾನ ನೆಲಕ್ಕಪ್ಪಳಿಸಿತು. ಸಾವನಪ್ಪಿದವರಲ್ಲಿ ಆರು ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ಇತರ ತುರ್ತು ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ವಿಮಾನ ಟೇಕಾಫ್ ಸಮಯದಲ್ಲೇ ಇಂಜಿನ್ ಸಮಸ್ಯೆ ಕಾಣಿಸಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಹಾರಾಟದ ವೇಳೆ ಪೈಲಟ್ ನಿಯಂತ್ರಣಕ್ಕೆ ಸಿಗದೆ ದುರಂತ ಘಟಿಸಿದೆ. ವಿಮಾನ ಬಿದ್ದಿರುವ ಸ್ಥಳದಲ್ಲಿ ಏಳು ಮನೆಗಳು ನಾಶವಾಗಿವೆ. ಆರು ಇತರ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಮೆಡೆಲಿನ್ ಮೇಯರ್ ಡೇನಿಯಲ್ ಕ್ಚಿಂಟೆರೊ ಮಾಹಿತಿ ನೀಡಿದ್ದಾರೆ.