Monday, December 23, 2024

ಶಿವಣ್ಣನ ‘ಜೈಲರ್’ ಲುಕ್ ರಿವೀಲ್.. ಚೆನ್ನೈನಲ್ಲಿ ಕಮಾಲ್..!

125 ಸಿನಿಮಾಗಳನ್ನ ಪೂರೈಸಿರೋ ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್, ಇದೀಗ ಮಹತ್ವದ ಹೆಜ್ಜೆ ಇಡಲು ಮುಂದಾಗಿದ್ದಾರೆ. ತಲೈವಾ ರಜನೀಕಾಂತ್ ಜೊತೆ ಜೈಲರ್​ನಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಚೆನ್ನೈನಲ್ಲಿ ಬೀಡು ಬಿಟ್ಟಿರೋ ಶಿವಣ್ಣನ ಫಸ್ಟ್ ಲುಕ್ ಬೇರೆ ರಿವೀಲ್ ಆಗಿದೆ. ಈ ಕುರಿತ ಲೇಟೆಸ್ಟ್ ಅಪ್ಡೇಟ್ಸ್ ನೀವೇ ಓದಿ.

  • ಅಂದು ಬಾಲಯ್ಯ ಜೊತೆ.. ಇಂದು ತಲೈವಾ ಜೊತೆ ಶಿವಣ್ಣ
  • ಡಾಕ್ಟರ್, ಬೀಸ್ಟ್ ಸಾರಥಿಯ ಜೈಲರ್​ನಲ್ಲಿ ಶಿವಣ್ಣ v/s ರಜನಿ
  • ಹೈ ವೋಲ್ಟೇಜ್ ಌಕ್ಷನ್ ವೆಂಚರ್​ಗೆ ಅನಿರುದ್ದ್ ಮಾಸ್ ಟ್ಯೂನ್

ಕಬಾಲಿ, ಕಾಲ, 2.O, ಪೆಟ್ಟಾ, ದರ್ಬಾರ್, ಅಣ್ಣಾತೆ ಹೀಗೆ ಇಳಿವಯಸ್ಸಿನಲ್ಲೂ ಸಾಲು ಸಾಲು ಮಾಸ್ ಮಸಾಲ ಸಿನಿಮಾಗಳಿಂದ ಸಂಚಲನ ಮೂಡಿಸ್ತಿರೋ ನಟ ಸೂಪರ್ ಸ್ಟಾರ್ ರಜಿನೀಕಾಂತ್. ಬಾಕ್ಸ್ ಆಫೀಸ್​ನಲ್ಲೂ ಧೂಳೆಬ್ಬಿಸ್ತಿರೋ ರಜನಿ, ಇದೀಗ ತಮ್ಮ 169ನೇ ಪ್ರಾಜೆಕ್ಟ್ ಜೈಲರ್​ನಲ್ಲಿ ಬ್ಯುಸಿ ಆಗಿದ್ದಾರೆ.

ಅಣ್ಣಾಥೆ ಬಳಿಕ ತಲೈವಾಗೆ ಇದು 169ನೇ ಸಿನಿಮಾ ಆದ್ರೆ, ಸ್ಯಾಂಡಲ್​ವುಡ್ ಕಿಂಗ್ ಡಾ. ಶಿವರಾಜ್​ಕುಮಾರ್ ಅವ್ರಿಗೆ 126ನೇ ಸಿನಿಮಾ. ಹೋಮ್ ಬ್ಯಾನರ್​ನ ವೇದ ಸಿನಿಮಾ ಶೂಟಿಂಗ್ ಮುಗಿಸಿ, ಘೋಸ್ಟ್ ಜೊತೆ ಜೊತೆಗೆ ಜೈಲರ್​ಗೆ ಕಾಲಿಟ್ಟಿದ್ದಾರೆ ಶಿವಣ್ಣ. ಸದ್ಯ ಚೆನ್ನೈನಲ್ಲಿ ಬೀಡು ಬಿಟ್ಟಿರೋ ಸ್ಯಾಂಡಲ್​ವುಡ್ ಲೀಡರ್, ತಲೈವಾ ರಜನಿ ಜೊತೆ ಶೂಟಿಂಗ್ ಅಖಾಡಕ್ಕೆ ಇಳಿದಿದ್ದಾರೆ.

ಶಿವಣ್ಣನ ಫಸ್ಟ್ ಲುಕ್ ಕೂಡ ರಿವೀಲ್ ಆಗಿದ್ದು, ರಜನಿ- ಶಿವಣ್ಣ ಜುಗಲ್ಬಂದಿ ಜೋರಿರಲಿದೆ ಅನ್ನೋದ್ರ ಹಿಂಟ್ ಸಿಕ್ಕಿದೆ. ಆಗಸ್ಟ್ 22ರಂದು ಶುರುವಾದ ಜೈಲರ್ ಶೂಟಿಂಗ್ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಶಿವಣ್ಣ, ರಜನಿ ಜೊತೆ ಸಿನಿಮಾದಲ್ಲಿ ಶಿವಗಾಮಿ ಖ್ಯಾತಿಯ ರಮ್ಯಾಕೃಷ್ಣ, ಕಮೆಡಿಯನ್ ಯೋಗಿ ಬಾಬು ಹಾಗೂ ಮಲಯಾಳಂ ನಟ ವಿನಾಯಕ ಇರಲಿದ್ದಾರೆ.

ಡಾಕ್ಟರ್ ಹಾಗೂ ಬೀಸ್ಟ್ ಸಿನಿಮಾಗಳಿಂದ ಟಾಕ್ ಆಫ್ ದಿ ಟೌನ್ ಆಗಿದ್ದ ನೆಲ್ಸನ್ ಜೈಲರ್ ಚಿತ್ರಕ್ಕೆ ಌಕ್ಷನ್ ಕಟ್ ಹೇಳ್ತಿದ್ದು, ಹೈ ವೋಲ್ಟೇಜ್ ಌಕ್ಷನ್ ಜಾನರ್​ನ ಸಿನಿಮಾ ಆಗಿ ರೂಪುಗೊಳ್ಳುತ್ತಿದೆ. ಸನ್ ಪಿಕ್ಚರ್ಸ್​ ಬ್ಯಾನರ್​ನಡಿ ತಯಾರಾಗ್ತಿರೋ ಜೈಲರ್​ಗೆ ಅನಿರುದ್ದ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದು, ಮತ್ತೆ ರಜನಿ- ಅನಿರುದ್ದ್ ಕಾಂಬೋ ಮೋಡಿ ಮಾಡಲಿದೆ.

ಅಂದಹಾಗೆ ಶಿವಣ್ಣನಿಗೆ ಇದು ಚೊಚ್ಚಲ ತಮಿಳು ಸಿನಿಮಾ. ಈ ಹಿಂದೆ ನಂದಮೂರಿ ಬಾಲಕೃಷ್ಣಗಾಗಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಗೌತಮಿಪುತ್ರ ಶಾತಕರ್ಣಿ ಅನ್ನೋ ಐತಿಹಾಸಿಕ ಸಿನಿಮಾದಲ್ಲಿ ಕಥಾನಾಯಕನ ಶೌರ್ಯ, ಸಾಹಸಗಳನ್ನು ಸಾರುವ ವ್ಯಕ್ತಿಯಾಗಿ ಸ್ಪೆಷಲ್ ಅಪಿಯರೆನ್ಸ್ ನೀಡಿದ್ರು. ಅದಾದ ಬಳಿಕ ಈಗ ರಜನಿಗಾಗಿ ಪಕ್ಕದ ಕಾಲಿವುಡ್​ಗೂ ಪದಾರ್ಪಣೆ ಮಾಡಿದ್ದಾರೆ.

ಒಟ್ಟಾರೆ ಈ ಇಬ್ಬರು ಲೆಜೆಂಡ್​ಗಳನ್ನ ಒಂದೇ ಫ್ರೇಮ್​ನಲ್ಲಿ ನೋಡೋಕೆ ಇಡೀ ಭಾರತೀಯ ಚಿತ್ರರಂಗ ಕಾಯ್ತಿದ್ದು, 2023ರ ಏಪ್ರಿಲ್​ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಶಿವಣ್ಣನ ರೋಲ್ ಏನು..? ಹೇಗಿರಲಿದೆ ಅನ್ನೋದು ಇನ್ನೂ ಗೌಪ್ಯವಾಗಿಯೇ ಇರೋದ್ರಿಂದ ಸಿನಿಮಾದ ಮೇಲಿನ ನಿರೀಕ್ಷೆ ಕೊಂಚ ಜಾಸ್ತಿನೇ ಇದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES