ನವದೆಹಲಿ; ಇಂಡಿಗೊ ವಿಮಾನಯಾನ ಕಂಪನಿಯು ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ದೆಹಲಿ ನಡುವೆ ಇಂದಿನಿಂದ ನಿತ್ಯ ವಿಮಾನ ಸೇವೆ ಆರಂಭಿಸಿದೆ. ಈ ಇಂಡಿಗೋ ವಿಮಾನವು ಪ್ರತಿದಿನ ಬೆಳಿಗ್ಗೆ 10ಕ್ಕೆ ದೆಹಲಿಯಿಂದ ಹೊರಟು ಹುಬ್ಬಳ್ಳಿಯನ್ನು ಮಧ್ಯಾಹ್ನ 12.45ಕ್ಕೆ ತಲುಪಲಿದೆ. ಮರಳಿ ಮಧ್ಯಾಹ್ನ 1.15ಕ್ಕೆ ಹುಬ್ಬಳ್ಳಿಯಿಂದ ಹೊರಟು 3.45ಕ್ಕೆ ದೆಹಲಿ ತಲುಪಲಿದೆ.
ಈ ವಿಮಾನಯಾನ ಸೇವೆಯನ್ನು ಉದ್ಘಾಟಿಸಿದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಹುಬ್ಬಳ್ಳಿ ವಿಮಾನ ನಿಲ್ದಾಣವು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ನಿವಾಸಿಗಳಿಗೆ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಲಿದೆ ಎಂದು ಅಭಿಪ್ರಾಯ ಪಟ್ಟರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತಿದೆ. ಹುಬ್ಬಳ್ಳಿ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡ ನಿರ್ಮಿಸಲಾಗಿದೆ. ಐಎಲ್‌ಎಸ್ ವ್ಯವಸ್ಥೆ ಅಳವಡಿಸಲಾಗಿದ್ದು ರನ್‌ವೇಯನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿಯಿಂದ ನವದೆಹಲಿಗೆ ಮೊದಲ ವಿಮಾನದಲ್ಲಿಯೇ ಪ್ರಯಾಣ ಬೆಳೆಸಿದರು. ದೆಹಲಿ ತಲುಪಿದ ಬಳಿಕ ಟ್ವೀಟ್ ಮಾಡಿದ ಅವರು, ಒಂದು ಅದ್ಭುತ ಹಾಗೂ ಬಹುಕಾಲದ ವರೆಗೆ ನೆನಪಿನಲ್ಲಿ ಉಳಿಯುವಂತಹ ಸುಂದರ ಪ್ರಯಾಣವಾಗಿತ್ತು. ಸೋಮವಾರ (ಇಂದಿನಿಂದ) ಈ ನೇರ ವಿಮಾನ ಸೇವೆ ಆರಂಭಗೊಂಡಿದ್ದು, ಬರುವ ದಿನಗಳಲ್ಲಿ ಪ್ರಯಾಣಿಕರಿಗೆ ಇದರಿಂದ ಭಾರೀ ಅನುಕೂಲವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.