ಶಿವಮೊಗ್ಗ: ಮಲೆನಾಡು ಭಾಗದ ಹೋರಾಟಗಾರ ಕೃಷ್ಣಪ್ಪ, ವಿಭಿನ್ನ ರೀತಿಯ ಪ್ರತಿಭಟನೆಯಿಂದ ಸದಾ ಗಮನ ಸೆಳೆಯುತ್ತಾರೆ. ಅದರಂತೆ, ಈ ಬಾರಿಯೂ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಈ ಬಾರಿ ಹೆಲ್ಮೆಟ್ ಬಗ್ಗೆ ಜನ ಜಾಗೃತಿ ಜಾಥಾ ನಡೆಸಿ, ಸುದ್ಧಿಯಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಡ್ಡಾಯವಾಗಿ ಹೆಲ್ಮೆಟ್ ಹಾಕುವಂತೆ ಅದೇಶಿಸಲಾಗಿದ್ದರೂ ಕೂಡ, ದ್ವಿಚಕ್ರ ಸವಾರರು ಹೆಲ್ಮಟ್ ಹಾಕದೇ ನಿರ್ಲಕ್ಷ್ಯ ವಹಿಸಿರುವುದು ಮತ್ತು ನಿತ್ಯ ಸಾಕಷ್ಟು ಅಪಘಾತಗಳು ಸಂಭವಿಸಿ ಸಾವನ್ನಪ್ಪುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಪಟ್ಟಣದಲ್ಲಿ ಜನಪರ ಹೋರಾಟಗಾರ ಸಾಮಾಜಿಕ ಕಾರ್ಯಕರ್ತ ಟಿ.ಆರ್. ಕೃಷ್ಣಪ್ಪ ಸೈಕಲ್ ಸವಾರಿ ಮೂಲಕ ವಿಭಿನ್ನ ರೀತಿಯಲ್ಲಿ ಮೂರು ಹೆಲ್ಮೆಟ್ ಹಾಕಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಮಹಾತ್ಕಾರ್ಯಕ್ಕೆ ಮುಂದಾಗಿದ್ದಾರೆ. 72 ವರ್ಷದ ಕೃಷ್ಣಪ್ಪ ಅವರ ಲವಲವಿಕೆ ಜೀವನ ಶೈಲಿ ಎಂತವರನ್ನು ಬೆರಗುಗೊಳಿಸುತ್ತದೆ.
ಇವರ ಈ ವಿನೂತನ ವಿಭಿನ್ನ ರೀತಿಯ ಜನಜಾಗೃತಿಯಿಂದಾಗಿ ಪೊಲೀಸ್ ಇಲಾಖೆ ಸಿಬ್ಬಂದಿಗಳು, ದ್ವಿಚಕ್ರ ವಾಹನ ಸವಾರರಿಗೆ ಹಿಡಿದು ಕೇಸ್ ದಾಖಲಿಸುವುದು ಮತ್ತು ವಿಮೆ ಮಾಡಿಸುವಂತೆ ಅರಿವು ಮೂಡಿಸುತ್ತಿದ್ದರೂ ಇನ್ನೂ ಜಾಗೃತರಾಗದಿರುವುದು, ಇವರಿಗೆ ನೋವುಂಟು ಮಾಡಿದ್ದು, ಹೀಗಾಗಿ, ಮೂರು ಹೆಲ್ಮೆಟ್ ಧರಿಸಿ, ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ ಪ್ರತಿಯೊಬ್ಬರು ಕೂಡ, ಹೆಲ್ಮೆಟ್ ಧರಿಸಿ, ವಾಹನ ಚಲಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.