ಮಂಗಳೂರು : ಕರಾವಳಿಯಂದ್ರೆ ಹಿಂದುತ್ವ, ಮೋದಿ ಹೆಸರಿನ ಮಂತ್ರೋಚ್ಛಾರಕ್ಕೆ ಜನ ಒಲಿಯುತ್ತಾರೆ ಅನ್ನೋದು ಈ ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿತ್ತು. ಇದೇ ಕಾರಣಕ್ಕೋ ಏನೋ ರಾಜ್ಯ ಸರಕಾರದ ಜನಸಂಕಲ್ಪ ಯಾತ್ರೆಯ ಕರಾವಳಿಯತ್ತ ತಿರುಗಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ, ಮೊದಲ ಹೆಜ್ಜೆಯಲ್ಲೇ ಪ್ರಧಾನಿ ಮೋದಿಯ ಮಂತ್ರ ಜಪ ಮಾಡಿದ್ದಾರೆ. ಕೇಂದ್ರ ಸರಕಾರದ ಗತಿಶಕ್ತಿ ಯೋಜನೆಯಿಂದಾಗಿ ಎರಡು ಲಕ್ಷ ಕೋಟಿ ರೂ. ಅನುದಾನ ಕರಾವಳಿ ಜಿಲ್ಲೆಗಳಿಗೆ ಬರಲಿದೆ. ಇದಕ್ಕಾಗಿ ಡಬಲ್ ಇಂಜಿನ್ ಸರಕಾರವೇ ಮತ್ತೆ ಬರಬೇಕಾಗಿದೆ. ಮೋದಿ ಶಕ್ತಿಗೆ ಮತ್ತೆ ಜನರು ಕೈಜೋಡಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನಸೆಳೆದಿದ್ದಾರೆ. ಜನರನ್ನು ಸೆಳೆಯಲು ಮೋದಿ ಜಪದ ಜೊತೆಗೆ ರಾಜ್ಯ ಸರಕಾರ ಕರಾವಳಿ ಜನತೆಗೆ ಕೊಟ್ಟಿರುವ ಅನುದಾನ, ಯೋಜನೆಗಳನ್ನು ಮುಖ್ಯಮಂತ್ರಿ ಮುಂದಿಟ್ಟಿದ್ದಾರೆ. ಕಾರವಾರ, ಉಡುಪಿ, ಮಂಗಳೂರು ಬಂದರು ಅಭಿವೃದ್ಧಿಯ ಜೊತೆಗೆ ಈ ಭಾಗದ ಜನರು ಉಣ್ಣುವ ಕುಚಲಕ್ಕಿ ನೀಡುವುದಕ್ಕೆ ಸರಕಾರ ಬದ್ಧ ಇದೆ. ಇದಕ್ಕಾಗಿ ಈಗಾಗಲೇ ಆದೇಶ ಮಾಡಿದ್ದು, ಸ್ಥಳೀಯ ಗಿರಣಿಗಳಿಂದ ಅಕ್ಕಿ ಖರೀದಿಸಿ ನ್ಯಾಯಬೆಲೆ ಅಂಗಡಿಯಲ್ಲಿ ಪೂರೈಸುವ ಕೆಲಸ ಆಗಲಿದೆ ಎಂದು ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಬೊಮ್ಮಾಯಿ, ಸಿದ್ದರಾಮಯ್ಯ ಭಾಷಣದಲ್ಲಿ ಅಹಿಂದ, ಸಾಮಾಜಿಕ ನ್ಯಾಯ ಎಂದು ಹೇಳ್ತಾರೆ. ಅಹಿಂದವನ್ನು ಈಗೆಲ್ಲಿ ಮಾಡಿದ್ದೀರಿ, ಅಹಿಂದ ಎಲ್ಲ ಬಿಟ್ಟು ಈಗ ಒಬ್ಬರೇ ಮುಂದೆ ಹೋಗಿದ್ದಾರೆ. ಮುಂದೆ ಕಾಂಗ್ರೆಸ್ ಸರಕಾರವೇ ಬರ್ತದೆ ಎಂದು ಹೇಳ್ತಿದ್ದಾರೆ. ಅವರ ಸರಕಾರ ಬರೋದು ಒತ್ತಟ್ಟಿಗಿರಲಿ, ಶಾಸಕರಾಗಿದ್ದವರು ತಮ್ಮ ಕ್ಷೇತ್ರ ಉಳಿಯುತ್ತಾ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕರ ಭ್ರಷ್ಟಾಚಾರದ ಬಗ್ಗೆ ಉಲ್ಲೇಖಿಸಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಇದ್ದಂತೆ. 50 ವರ್ಷಗಳಿಂದ ಭ್ರಷ್ಟಾಚಾರವನ್ನೇ ಮಾಡ್ಕೊಂಡು ಬಂದಿದ್ದಾರೆ. ಮಕ್ಕಳಿಗೆ ಕೊಡುವ ದಿಂಬಿನಲ್ಲೂ ಹಗರಣ ಮಾಡಿದ್ದೀರಿ. ಸೋಲಾರ್ ಹೆಸರಿನಲ್ಲೂ ಭ್ರಷ್ಟಾಚಾರ ಮಾಡಿದ್ದೀರಿ. ಬಿಡಿಎ ಸೈಟಿನಲ್ಲೂ ಭೃಷ್ಟಾಚಾರ ಮಾಡಿದ್ದೀರಿ. ಸಣ್ಣ ನೀರಾವರಿ ಯೋಜನೆಯಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದೀರಿ ಎಂದು ದೂರಿದರು. ಪ್ರಧಾನಿ ಮೋದಿ ಎಲ್ಲ ವರ್ಗದ ಬಡವರಿಗೂ ಬಿಪಿಎಲ್ ಕಾರ್ಡ್‌ನವರಿಗೆ ಮೀಸಲಾತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ದೇಶ ಅಭಿವೃದ್ಧಿ ಆಗಲಿದೆ. ಅದಕ್ಕಾಗಿ ಡಬಲ್ ಇಂಜಿನ್ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕಾಗಿದೆ. ಈ ಭಾಗದಲ್ಲಿ ಬಿಲ್ಲವರು ನಾರಾಯಣ ನಿಗಮ ಆಗಬೇಕು ಎನ್ನುವ ಪ್ರಸ್ತಾಪ ಇಟ್ಟಿದ್ದಾರೆ. ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಒಟ್ಟಿನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜನಸಂಕಲ್ಪ ಕರಾವಳಿಯಲ್ಲೂ ಶುರುವಾಗಿದ್ದು, ಮತ್ತೆ ಕ್ಲೀನ್ ಸ್ವೀಪ್ ನಡೆಸುವತ್ತ ಬಿಜೆಪಿ ಸಂಕಲ್ಪ ಮಾಡಿಕೊಂಡಿದೆ.
ಗಿರಿಧರ್ ಶೆಟ್ಟಿ ಪವರ್ ಟಿವಿ ಮಂಗಳೂರು