ಮಂಗಳೂರು : ಕರಾವಳಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಗೋಹಂತಕರ ಪಾಲಿಗೆ ಗಧಾಪ್ರಹಾರ ಅನ್ನುವಂತೆ ಬೀಸತೊಡಗಿದೆ. ಗೋವನ್ನು ಅಕ್ರಮವಾಗಿ ಸಾಗಾಟ ಮಾಡಿ ಸಿಕ್ಕಿಬಿದ್ದರೂ, ಎಲ್ಲೋ ಕಸಾಯಿಖಾನೆ ನಡೆಸುತ್ತಿದ್ದೋರ ಜಾಗವೇ ಜಪ್ತಿಯಾಗುವಂತೆ ಕಾನೂನು ತಗ್ಲಾಕ್ಕೊಳ್ತಿದೆ. 2020ರಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಾಗ, ಇದರ ಬಿಸಿ ಇಷ್ಟು ತಟ್ಟುತ್ತೆ ಎಂದು ಯಾರೂ ಅಂದ್ಕೊಂಡಿರಲಿಲ್ಲ. ಎರಡು ವರ್ಷವೂ ತಣ್ಣಗಿದ್ದ ಕಾನೂನಿನ ಕುಣಿಕೆಯನ್ನು ಚುನಾವಣೆ ಕಾಲದಲ್ಲಿ ಬಿಜೆಪಿ ಸರಕಾರ ಪ್ರಯೋಗಿಸಲು ಮುಂದಾಗಿದೆ. ಒಂದೇ ತಿಂಗಳ ಅಂತರದಲ್ಲಿ ಮಂಗಳೂರು ನಗರದ ಆಸುಪಾಸಿನಲ್ಲಿ ನಾಲ್ಕು ಕಡೆ ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದ ಜಾಗವನ್ನು ಜಪ್ತಿ ಮಾಡಲಾಗಿದೆ.
ಮೊನ್ನೆ ಅಕ್ಟೋಬರ್ 29ರಂದು ಅಕ್ರಮ ಗೋಸಾಗಾಟ ಮಾಡುತ್ತಿದ್ದ ಏಳು ಮಂದಿಯನ್ನು ಬಂಧಿಸಿದ್ದ ಮಂಗಳೂರಿನ ಕಂಕನಾಡಿ ನಗರ ಠಾಣೆ ಪೊಲೀಸರು ಗೋಹತ್ಯೆ ನಿಷೇಧ ಕಾಯ್ದೆಯಡಿ ಕೇಸು ದಾಖಲಿಸಿದ್ದರು. ಆರೋಪಿಗಳ ವಿಚಾರಣೆ ವೇಳೆ, ಅದ್ಯಪಾಡಿಯಲ್ಲಿ ಅಕ್ರಮ ಕಸಾಯಿಖಾನೆ ಮಾಡುತ್ತಿರುವುದನ್ನು ತಿಳಿಸಿದ್ದರು. ಈ ಬಗ್ಗೆ ಪೊಲೀಸರು ಮಂಗಳೂರಿನ ಮೂರನೇ ಸಿಜೆಎಂ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿಯನ್ನೂ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಮಂಗಳೂರಿನ ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಆಸ್ತಿ ಮುಟ್ಟುಗೋಲು ಕ್ರಮಕ್ಕೆ ಸೂಚನೆ ನೀಡಿದ್ದು ಅಧಿಕಾರಿಗಳು ಕ್ರಮ ಜರುಗಿಸಿದ್ದಾರೆ.
ಮಂಗಳೂರು ವಿಭಾಗ ಆಯುಕ್ತ ಮದನಮೋಹನ್ ಅದ್ಯಪಾಡಿಯಲ್ಲಿ ಕಸಾಯಿಖಾನೆ ನಡೆಸುತ್ತಿದ್ದ ಯಾಕೂಬ್ ಎಂಬವರಿಗೆ ಸೇರಿದ 15 ಸೆಂಟ್ಸ್ ಜಾಗ ಮತ್ತು ಅಲ್ಲಿನ ಕಟ್ಟಡವನ್ನು ಜಪ್ತಿ ಮಾಡುವಂತೆ ನಗರ ಠಾಣೆ ಪೊಲೀಸರಿಗೆ ಆದೇಶ ಮಾಡಿದ್ದಾರೆ. ಅಲ್ಲದೆ, ಕಟ್ಟಡ ಮತ್ತು ಜಾಗದ ಅಂದಾಜ ಮೌಲ್ಯಮಾಪನ ಮಾಡಿ ಕಂದಾಯ ಇಲಾಖೆಯ ವಶಕ್ಕೆ ಒಪ್ಪಿಸುವಂತೆ ಸೂಚಿಸಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆಯಡಿ ಗೋವನ್ನು ಹತ್ಯೆ ಮಾಡುವ ಜಾಗವನ್ನು ಜಪ್ತಿ ಮಾಡಲು ಅವಕಾಶವಿದ್ದು, ಅದರಂತೆ ಪೊಲೀಸರು ಕ್ರಮ ಜರುಗಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ವೇದವ್ಯಾಸ ಕಾಮತ್, ಅಕ್ರಮ ಗೋಹತ್ಯೆ ಮಾಡುವರಿಗೆ ಸ್ಪಷ್ಟ ಸಂದೇಶ ರವಾನಿಸಿದಂತಾಗಿದೆ. ಈ ಮೂಲಕ ಗೋಹಂತಕರಿಗೆ ಕಠಿಣ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದಿದ್ದಾರೆ.
ಕರಾವಳಿ ಮಟ್ಟಿಗೆ ಹಿಂದುತ್ವ, ಗೋಹತ್ಯೆ ವಿಚಾರದಲ್ಲಿ ಮತ ಕ್ರೋಡೀಕರಣ ಮಾಡುವ ಬಿಜೆಪಿಗೆ ಗೋಹತ್ಯೆ ಕಾನೂನು ದಾಳವಾಗಿ ಪರಿಣಮಿಸಿದ್ದು, ಒಂದೆಡೆ ಗೋಹಂತಕರನ್ನು ಕಾನೂನು ಕುಣಿಕೆಯಲ್ಲಿ ಸಿಲುಕಿಸುತ್ತಿದ್ದರೆ ಇನ್ನೊಂದೆಡೆ ಕೋಮು ಧ್ರುವೀಕರಣಕ್ಕೂ ಬಳಕೆಯಾಗುವಂತಾಗಿದೆ.
ಗಿರಿಧರ್ ಶೆಟ್ಟಿ ಪವರ್ ಟಿವಿ ಮಂಗಳೂರು