ಧಾರವಾಡ : ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ನೇತೃತ್ವದಲ್ಲಿ ಅಬ್ಬರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ನಿಗದಿ ಪಡಿಸಿದ ಬೆಲೆ ಅತ್ಯಂತ ಕಡಿಮೆ ಇದೆ. ಹಾಗಾಗಿ ಕಬ್ಬಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಬೆಲೆ ನಿಗದಿ ಮಾಡಬೇಕೆಂದು ಶಾಂತಕುಮಾರ ಆಗ್ರಹಿಸಿದ್ದಾರೆ.
ಕಬ್ಬಿನ ಬೆಲೆ ನಿಗದಿಗೆ ಸಂಬಂಧಪಟ್ಟಂತೆ ಸರ್ಕಾರ ದೀಪಾವಳಿಗೆ ಸಿಹಿ ಸುದ್ದಿ ಕೊಡುವುದಾಗಿ ಹೇಳಿತ್ತು. ಅಲ್ಲದೆ ನಾಲ್ಕು ಸಲ ಸಭೆ ನಡೆಸಿದ್ರು, ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಲಘಟಗಿ, ದಾಂಡೇಲಿ, ಹಳಿಯಾಳ ಮತ್ತು ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಯಿಂದ ಬಂದಿರುವ ಕಬ್ಬು ಬೆಳೆಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಸಕ್ಕರೆ ಸಚಿವರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿಕೊಂಡು, ರೈತರನ್ನು ಸಮಾಧಾನ ಪಡಿಸಲು ಬಂದ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮನವಿಯನ್ನು ರೈತರು ತಳ್ಳಿ ಹಾಕಿದರು. ಒಟ್ಟಿನಲ್ಲಿ ಕಬ್ಬು ಬೆಳೆಗಾರರು ಧಾರವಾಡದಲ್ಲಿ ಆರಂಭಿಸಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.