ವಿಜಯಪುರ; ಬಹು ನಿರೀಕ್ಷಿತ ವಿಜಯಪುರ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಬಹುತೇಕ ಬಿಜೆಪಿ ತೆಕ್ಕೆಗೆ ಪಾಲಿಕೆ ಬಿದ್ದಿದ್ದು, ಮೊದಲ ಬಾರಿಗೆ ಎಐಎಂಐಎಂ ಪಾಲಿಕೆಯಲ್ಲಿ ಖಾತೆ ತೆರೆದಿದೆ. ಇನ್ನೂ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆಯ ಫಲಿತಾಂಶ ಕೊನೆಗೂ ಹೊರಬಿದ್ದಿದ್ದು 35 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ-17 ವಾರ್ಡ್‌ನಲ್ಲಿ, ಕಾಂಗ್ರೆಸ್-10 ವಾರ್ಡ್‌ನಲ್ಲಿ, ಎಐಎಂಐಎಂ-02 ಸ್ಥಾನಗಳಲ್ಲಿ ಪಕ್ಷೇತರರು-05 ಸ್ಥಾನಗಳಲ್ಲಿ ಹಾಗೂ ಜೆಡಿಎಸ್ ಒಂದೇ ಸ್ಥಾನದಲ್ಲಿ ಗೆಲ್ಲುವ ಮೂಲಕ ಆಟಕುಂಟು ಲೆಕ್ಕಕ್ಕಿಲ್ಲದಂತಾಗಿದೆ.
ಎಐಎಂಐಎಂನ ರಾಷ್ಟ್ರೀಯ ಅಧ್ಯಕ್ಷ ಅಸಾಹುದ್ದೀನ ಓವೈಸಿ ಇದೇ ಮೊದಲ ಬಾರಿಗೆ ಪಾಲಿಕೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಒಟ್ಟು ನಾಲ್ಕು ವಾರ್ಡ್‌ಗಳಲ್ಲಿ ಟಿಕೆಟ್ ಕೊಟ್ಟಿದ್ದು ಅದರಲ್ಲಿ ಎರಡು ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ವಿಜಯಪುರ ಮಹಾನಗರದಲ್ಲಿ ಎಐಎಂಐಎಂ ತನ್ನ ಖಾತೆ ತೆರೆದಿದೆ.
ಇನ್ನೂ ಬಿಜೆಪಿಯಲ್ಲಿ ಸಾಕಷ್ಟು ಬಣ ರಾಜಕೀಯಗಳಿದ್ದರೂ ಸಹಿತ ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಒಂದೇ ಎಂಬಂತೆ ಬಿಂಬಿಸಿ ಸಭೆ ಸಮಾರಂಭ ನಡೆಸಿದ್ದರು, ಜೊತೆಗೆ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ಮಾಡಿದ್ದರು, ಇದು ಬಿಜೆಪಿಗೆ ಪಾಸಿಟಿವ್ ಆಗಿ ಮಾರ್ಪಟ್ಟಿದ್ದು 35 ಸ್ಥಾನಗಳ ಪೈಕಿ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುತೇಕ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಬಿಜೆಪಿ ತೆಕ್ಕೆಗೆ ಒಲಿಯುವ ಸಾದ್ಯತೆ ಇದೆ.
ಪಾಲಿಕೆ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ 10 ಸ್ಥಾನ ಗೆದ್ದರೆ, ಬಿಜೆಪಿ 17, ಎಐಎಂಐಎಂ 2, ಪಕ್ಷೇತರರು 5 ಹಾಗೂ ಜೆಡಿಎಸ್ ಒಂದು ಸ್ಥಾನಕ್ಕೆ ಮಾತ್ರ ತೃಪ್ತಿ ಪಟ್ಟಿದೆ. ಇನ್ನೂ ಅತ್ಯಧಿಕ ಸ್ಥಾನ ಗೆದ್ದ ಬಿಜೆಪಿಗೆ ಮತ್ತಷ್ಟು ಪಾಲಿಕೆಯಲ್ಲಿ ಬಲ ಬಂದಂತಾಗಿದ್ದು, ಇದೇ ಮೊದಲ ಬಾರಿಗೆ ಪಾಲಿಕೆಯ ಗದ್ದುಗೆ ಬಿಜೆಪಿ ಹಿಡಿಯುವ ಎಲ್ಲ ಸಾದ್ಯತೆಗಳು ಇವೆ.
ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಸಿಎಂ ಇಬ್ರಾಹಿಂ ಸೇರಿದಂತೆ ಶಾಸಕ ದೇವಾನಂದ ಚವ್ಹಾಣ ಅವರು ಸಹಿತ ಸಾಕಷ್ಟು ಪ್ರಚಾರ ಮಾಡಿದ್ದರು. ಆದರೆ ಮತದಾರರ ಮೇಲೆ ಅದು ಯಾವುದೇ ಪರಿಣಾಮ ಬೀರಿಲ್ಲ ಕೇವಲ ಒಂದು ಸ್ಥಾನಕ್ಕೆ ಜೆಡಿಎಸ್ ತೃಪ್ತಿ ಪಡುವಂತಾಗಿದೆ. ಇನ್ನೂ ಬಿಜೆಪಿ ಕಾಂಗ್ರೆಸ್ ನಿಂದ ಟಿಕೆಟ್ ವಂಚಿತರಾಗಿ ಯಾವುದೇ ಪಕ್ಷಕ್ಕೆ ಹೋಗದೇ ಪಕ್ಷೇತರರಾಗಿ ಸ್ಪರ್ಧಿಸಿದ್ದ ಐವರು ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಈ ಚುನಾವಣೆಯಲ್ಲಿ ಈ ಬಾರಿಯು ಗೆಲುವು ನಮ್ಮದೇ ಎಂದು ಕೊಂಡಿದ್ದು ಕೆಲ ಮಾಜಿ ಪಾಲಿಕೆ ಸದಸ್ಯರು ಹಾಗೂ ಬಂಡಾಯ ಅಭ್ಯರ್ಥಿಗಳಿಗೆ ಭಾರೀ ಹಿನ್ನಡೆಯಾಗಿದೆ. ಒಟ್ಟಾರೆ ಮಹಾನಗರ ಪಾಲಿಕೆಯ ಚುಕ್ಕಾಣಿ ಬಿಜೆಪಿ ಹಿಡಿಯುವದು ಬಹುತೇಕ ಖಚಿತವಾಗಿದ್ದರೂ ಸಹಿತ ಕೊನೆಯಗಳಿಗೆವರೆಗೂ ಸಹಿತ ಯಾವುದೂ ಅಸಾಧ್ಯವಿಲ್ಲ ಎಂಬುದು ಪ್ರಜ್ಞಾವಂತರ ಮಾತಾಗಿದೆ.
ಸುನೀಲ್ ಭಾಸ್ಕರ, ಪವರ ಟಿವಿ. ವಿಜಯಪುರ