ಬೆಂಗಳೂರು: ರಾಜೀನಾಮೆ ಏಕೆ ನೀಡಬೇಕು. ರಾಜೀನಾಮೆ ಕೊಡುವ ಕೆಲಸ ಏನೂ ಮಾಡಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಪೋಸ್ಟಿಂಗ್ನಲ್ಲಿ ಹಣ ಕೊಟ್ಟಿರೋದು, ತೆಗೆದುಕೊಂಡಿರೋದ್ರ ಬಗ್ಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಸಾಕ್ಷಿ ಇದ್ದರೆ ನೀಡಲಿ. ಒಬ್ಬ ಇನ್ಸ್‌ಪೆಕ್ಟರ್ ಆಗಿರೋನು ತಾಲ್ಲೂಕಲ್ಲಿ 70, 80ಲಕ್ಷ ಕೊಟ್ಟು ಕೆಲಸ ಮಾಡಲು ಆಗುತ್ತಾ, ಯಾರೋ ಹೇಳಿದ್ದನ್ನ ನಾನು ಹೇಳಿಕೊಂಡು ಹೋಗಿದ್ದೇನೆ ಎಂದು ತಮ್ಮ ಮಾತನ್ನ ಒಪ್ಪಿಕೊಂಡರು.
ನಮ್ಮ ಸರ್ಕಾರದಲ್ಲಿ ಯಾವುದೇ ಹಣ ಪಡೆದು ಪೋಸ್ಟಿಂಗ್ ನೀಡಿಲ್ಲ. ಉಚಿತವಾಗೇ ಪೋಸ್ಟಿಂಗ್ ಮಾಡ್ತಿದ್ದೀವಿ. ಯಾರು ಯಾರಿಗೂ ಹಣ ಕೊಡಬೇಕಿಲ್ಲ. ಹೆಚ್ ವಿಶ್ವನಾಥ್ ಅವರ ಸಂಬಂಧಿಕರು ಇನ್ಸ್‌ಪೆಕ್ಟರ್ ಮೊನ್ನೆ ಹೃದಯಾಘಾತದಿಂದ ಸತ್ತಾಗ ಆಸ್ಪತ್ರೆಗೆ ಹೋಗಿದ್ದೆ. ಅವರನ್ನ ನಾನು ಭೇಟಿಯೇ ಮಾಡಿರಲಿಲ್ಲ. ಕೆಲವರು ಸಿಕ್ಕಿದ್ದರು, ಏನಾಯ್ತು ಎಂದು ಕೇಳಿದ ವೇಳೆಯಲ್ಲಿ 70, 80 ಲಕ್ಷ ಹಣ ಕೊಟ್ಟು ಬಂದಿರೋದಾಗಿ ಹೇಳಿದರು.
70, 80ಲಕ್ಷ ಕೊಟ್ಟು ಬಾಯಿ ಬಡ್ಕೊಳೋಕೆ ಯಾಕೆ ಬಂದೆ ಎಂದು ಆಗ ಹೇಳಿದೆ. ಅದು ಬಿಟ್ಟು ನಾನು ಏನೂ ಹೇಳಿಲ್ಲ. ನಾನು ಎಂದೂ ಸರ್ಕಾರಕ್ಕೆ ಕೊಟ್ಟಿದ್ದಾರೆ ಅಂತ ಹೇಳಿಲ್ಲ. ನಂದೀಶ್ ಸತ್ತಿದ್ದಾರೆ, ಅವರೇ ಬಂದು ಹೇಳಬೇಕು. ಅವರನ್ನೇ ಕೇಳಬೇಕು ಅಂತ ಎಂಟಿಬಿ ಉಲ್ಟಾ ಹೊಡೆದರು.