ಶಿವಮೊಗ್ಗ; ಆಜಾದ್ ನಗರದಲ್ಲಿ ಕಾರು ಜಖಂ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿಂದೂ ಹರ್ಷ ಸಹೋದರಿ ಅಶ್ವಿನಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಳೆದ ಫೆ. 20 ರಂದು ಹರ್ಷ ಕೊಲೆಗೀಡಾಗಿದ್ದು, ಇದು ಶಿವಮೊಗ್ಗ ಸೇರಿದಂತೆ, ರಾಜ್ಯ, ದೇಶದೆಲ್ಲೆಡೆ ಭಾರಿ ಸುದ್ಧಿಯಾಗಿತ್ತು. ಇದೀಗ ಈ ಹರ್ಷ ಸಹೋದರಿ ಅಶ್ವಿನಿ ಸೇರಿದಂತೆ, 10-15 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶಿವಮೊಗ್ಗದಲ್ಲಿ ಅ. 22 ರಂದು ಸಾವರ್ಕರ್ ಸಾಮ್ರಾಜ್ಯ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ವೀರ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ಆಗಮಿಸಿದ್ದರು. ಸಾತ್ಯಕಿ ಸಾವರ್ಕರ್ ಅವರನ್ನು ಬೈಕ್ ಮತ್ತು ಇತರೆ ವಾಹನಗಳ ರ್ಯಾಲಿಯಲ್ಲಿ ನಗರದ ಸೈನ್ಸ್ ಮೈದಾನಕ್ಕೆ ಕರೆ ತರಲಾಗಿತ್ತು. ಈ ವೇಳೆ ಬೈಕ್ನಲ್ಲಿ ಬಂದಿದ್ದ ಯುವಕರ ಗುಂಪೊಂದು, ನಗರದ ಆಜಾದ್ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರಿಗೆ ಕಲ್ಲಿನಿಂದ ಹೊಡೆದು ಜಖಂ ಮಾಡಿತ್ತು.
ಆಜಾದ್ ನಗರದ ಹನೀಫ್ ಎಂಬುವರಿಗೆ ಸೇರಿದ ಕಾರು ಇದಾಗಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಎ 36 ಎಂ 2736 ಕ್ರಮ ಸಂಖ್ಯೆಯ ಇನ್ನೋವಾ ಕಾರಿಗೆ ಹಾನಿ ಮಾಡಿದ್ದು, ಸೀಗೆಹಟ್ಟಿ ನಿವಾಸಿ ಅಶ್ವಿನಿ ಮತ್ತು 10 ರಿಂದ 15 ಜನರ ಗುಂಪಿನಿಂದ ಹಾನಿ ಆರೋಪ ಹೊರಿಸಲಾಗಿದೆ. ಕಲ್ಲಪ್ಪನ ಕೇರಿಯಿಂದ ಗುಂಪಾಗಿ ಬಂದ ಬೈಕ್ ಸವಾರರರಿಂದ ಕಾರು ಜಖಂ ಆಗಿದ್ದು, ಕಾರಿನ ಎಡಭಾಗದ ಹೆಡ್ ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್ ಜಖಂ ಆಗಿದೆ.
ಅಲ್ಲದೇ, ಜೈ ಶ್ರೀರಾಮ್ ಎಂದು ಕೂಗುತ್ತಾ ಕೇಸರಿ ಬಾವುಟ ಹಿಡಿದುಕೊಂಡು ಬಂದ ಗುಂಪು ಈ ಹಾನಿ ಮಾಡಿದೆ ಎಂದು ಕಾರು ಮಾಲೀಕ ಪರ್ವೀಜ್ ದೂರು ದಾಖಲಿಸಿದ್ದಾರೆ.