ಚಾಮರಾಜನಗರ : ನೋಡಿದ್ರಲ್ಲ ಸಮಸ್ಯೆ ಹೇಳಿಕೊಳ್ಳಲು ಬಂದ ಬಡಪಾಯಿ ಮಹಿಳೆಗೆ ಸಚಿವ ವಿ.ಸೋಮಣ್ಣ ಹೇಗೆ ಕಪಾಳಮೋಕ್ಷ ಮಾಡಿದ್ರೋ ಅಂತಾ..? ಹೌದು, ನಿವೇಶನದ ಹಕ್ಕು ಪತ್ರ ಸಿಗದೆ ಕಚೇರಿಗಳಿಗೆ ಅಳೆದೂ ಅಳೆದೂ ಸಾಕಾಗಿ ಹೋಗಿದ್ದ ಮಹಿಳೆ ತಮ್ಮೂರಿಗೇ ಬಂದಿದ್ದ ಸಚಿವರು ಅದರಲ್ಲೂ ವಸತಿ ಸಚಿವರೇ ಆದ ಸೋಮಣ್ಣ ಬಳಿ ತನ್ನ ನೋವನ್ನು ತೋಡಿಕೊಳ್ಳಲು ಹತ್ತಿರ ಹೋಗಿದ್ದರು. ಇದಕ್ಕೇ ಸಿಡಿಮಿಡಿಗೊಂಡ ಮಂತ್ರಿ ಮಹಾಶಯ, ಸಿಡಿಮಿಡಿಗೊಂಡು ಆಕೆಯ ಕಪಾಳಕ್ಕೆ ಛಳ್ ಅಂತಾ ಹೊಡೆದೇ ಬಿಟ್ಟಿದ್ದಾರೆ. ತನ್ನ ನೋವನ್ನು ಹೇಳಿಕೊಳ್ಳಲು ಹೋದಾಕೆಗೆ ಮಂತ್ರಿಯ ರಕ್ಕಸ ವರ್ತನೆ ಭರಸಿಡಿಲು ಬಡಿದಂತಾಗಿದೆ.
ಕಷ್ಟ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಸೋಮಣ್ಣ ವಿರುದ್ಧ ಕೆರಳಿದ ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು 1 ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ಕೂಡಲೇ ಸಚಿವ ಸೋಮಣ್ಣರನ್ನು ಸಂಪುಟದಿಂದ ಕೈಬಿಡುವಂತೆ ಸಿಎಂ ಬೊಮ್ಮಾಯಿಯವರನ್ನು ಆಗ್ರಹಿಸಿದ್ರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಈ ಘಟನೆ ನಡೆಯುತ್ತಿದ್ದಂತೆ ಮಂತ್ರಿಯ ದರ್ಪದ ವಿಡಿಯೋ ಕಾಡ್ಗಿಚ್ಚಿನಂತೆ ರಾಷ್ಟ್ರವ್ಯಾಪಿ ಟ್ರೋಲ್ ಆಗಿದೆ. ದೇಶದ ಜನತೆ ಡಬಲ್ ಎಂಜಿನ್ ಸರ್ಕಾರದ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ಮಂತ್ರಿಯ ದರ್ಪದಿಂದ ಸರ್ಕಾರಕ್ಕೆ ಆಗುತ್ತಿರುವ ಡ್ಯಾಮೇಜ್‌ನಿಂದ ಎಚ್ಚೆತ್ತ ಬಿಜೆಪಿ ರಾಷ್ಟ್ರೀಯ ನಾಯಕರು, ಸಚಿವರನ್ನು ತರಾಟೆೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಮಂತ್ರಿಯ ದುರ್ನಡತೆಯಿಂದ ಬೇಸತ್ತ ಸಾರ್ವಜನಿಕರು ಇದು ಗೋವಿಂದರಾಜನಗರ ಅಲ್ಲ, ಚಾಮರಾಜನಗರ ಅಂತಾ ಸೋಮಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಸಚಿವ ಸೋಮಣ್ಣರ ಈ ನಡವಳಿಕೆ ಮಾಜಿ ಸಿಎಂಗಳನ್ನು ಕೆರಳಿಸಿದೆ. ಸೋಮಣ್ಣ ಸಚಿವರಾಗಿರಲು ನಾಲಾಯಕ್ ಅಂತಾ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದು ಬಿಜೆಪಿಯವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರ ನಡವಳಿಕೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ.ಸೋಮಣ್ಣ ಎರಡು ತರಹದ ಮುಖ ಹೊಂದಿದ್ದಾರೆ.ಎದುರು ಸಿಕ್ಕಾಗ ಒಂದು ರೀತಿ ಮಾತನಾಡಿಸುತ್ತಾರೆ.ಆದರೆ, ಒಳಗೆ ಇರುವ ನಡವಳಿಕೆಯೇ ಬೇರೆ ಅಂತಾ HDK ವಾಗ್ದಾಳಿ ನಡೆಸಿದ್ದಾರೆ.
ಕಪಾಳಕ್ಕೆ ಛಳ್ ಎಂದು ಹೊಡೆದಿರುವ ಸೋಮಣ್ಣರ ದುರ್ವರ್ತನೆಯ ವಿಡಿಯೋ ಸಾಕ್ಷ್ಯವಿದ್ದರೂ ಸೋಮಣ್ಣ ತಮ್ಮ ತಪ್ಪನ್ನು ಪ್ಯಾಚ್ ಅಪ್ ಮಾಡಿಕೊಂಡ್ರಾ..? ಎಂಬ ಅನುಮಾನಗಳಿಗೆ ಪುಷ್ಠಿ ಬಂದಿದೆ. ತಮ್ಮದೇ ಪಕ್ಷದ ನಾಯಕರಿಂದ ಮಂಗಳಾರತಿ ಮಾಡಿಕೊಂಡ ಬಳಿಕ ಎಚ್ಚೆತ್ತ ಸಚಿವ ಸೋಮಣ್ಣ ಕೂಡಲೇ ಕ್ಷಮೆಯಾಚಿಸಿದ್ದಲ್ಲದೆ, ಹೊಡೆದಿದ್ದನ್ನು ಸಾಕ್ಷೀಕರಿಸಲು ವಿಡಿಯೋ ಇದ್ದರೂ ಮಹಿಳೆಯಿಂದಲೂ ಮಂತ್ರಿ ಹೊಡೆದೇ ಇಲ್ಲ ಎಂಬಂತೆ ಹೇಳಿಕೆ ಕೊಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಪುಷ್ಠೀಕರಿಸಲು ಎಂಬಂತೆ ಕಪಾಳಮೋಕ್ಷ ಮಾಡಿಸಿಕೊಂಡ ಮಹಿಳೆ ಕೂಡ ಸಚಿವರು ನನ್ನ ಸಮಸ್ಯೆಗೆ ಸ್ಪಂದಿಸಿದರು. ಅವರು ನನ್ನನ್ನು ಹೊಡೆದೇ ಇಲ್ಲ ಎಂದು ಬಿಜೆಪಿ ಕಾರ್ಯಕರ್ತರ ಜೊತೆ ನಿಂತು ಹೇಳಿಕೆ ಕೊಟ್ಟಿದ್ದಾರೆ.
ಏನೇ ಆಗಲಿ ಸದಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸಚಿವ ಸೋಮಣ್ಣ, ತಮ್ಮ ಸಾಧನೆಗಳ ವಿಜಯಪಥ ಪುಸ್ತಕ ಬಿಡುಗಡೆಗೊಳಿಸಿ ಸಿಎಂ ಬೊಮ್ಮಾಯಿಯಿಂದಲೂ ಬಹುಪರಾಕ್ ಪಡೆದಿದ್ದರು. ಆದರೆ, ಸಮಸ್ಯೆ ಹೇಳಿಕೊಳ್ಳಲು ಹತ್ತಿರ ಬಂದ ಮಹಿಳೆಗೆ ಕಪಾಳಮೋಕ್ಷ ಮಾಡುವ ಮೂಲಕ ಸುಮಾರು 45 ವರ್ಷಗಳ ನಾಜೂಕಿನ ರಾಜಕಾರಣಕ್ಕೆ ಕಪ್ಪು ಚುಕ್ಕಿ ಅಂಟಿಸಿಕೊಂಡಂತಾಯಿತಾ ಸೋಮಣ್ಣರ ದುಡುಕಿನ ನಡೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಶ್ರೀನಿವಾಸ್ ನಾಯಕ್ ಪವರ್ ಟಿವಿ ಚಾಮರಾಜನಗರ