Friday, November 22, 2024

ಗೊಂದಲವಿಲ್ಲದ  ಸ್ಪಷ್ಟ ಕಾನೂನುಗಳ ರಚನೆ ಕಾನೂನು ರೂಪಿಸುವವರ ಜವಾಬ್ದಾರಿ: ಬಸವರಾಜ ಬೊಮ್ಮಾಯಿ

ಚಿತ್ರದುರ್ಗ; ಕಾನೂನಿನಲ್ಲಿ ಗೊಂದಲ ಕಡಿಮೆಯಿದ್ದು, ಹೆಚ್ಚು ಸ್ಪಷ್ಟತೆ ಇರುವಂತೆ ಕಾನೂನು ರಚಿಸಬೇಕು. ಇದು ಕಾನೂನು ರೂಪಿಸುವವರ ಜವಾಬ್ದಾರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು  ಇಂದು ಜಿಲ್ಲಾ ನ್ಯಾಯಾಂಗ ಇಲಾಖೆ, ಚಿತ್ರದುರ್ಗ ಹಾಗೂ ವಕೀಲ ಸಂಘ(ರಿ) ಹೊಸದುರ್ಗ ವತಿಯಿಂದ  ಆಯೋಜಿಸಿರುವ ಹೊಸದುರ್ಗ ನ್ಯಾಯಾಲಯದ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನ್ಯಾಯಾಲಯದ ತೀರ್ಪುಗಳ ಪ್ರಸ್ತುತತೆ ಬಗ್ಗೆ ಅರಿಯುವ ದೃಷ್ಟಿ ನ್ಯಾಯಾಧೀಶರು ಹಾಗೂ ವಕೀಲರಿಗೆ ಇರಬೇಕು. ಅಂತರರಾಜ್ಯ ಜಲವಿವಾದ ಕಾಯ್ದೆಯ ಕಲಂ 3 ರಂತೆ ಯಾವುದೇ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂದಾದಾಗ ಟ್ರಿಬ್ಯೂನಲ್ ರಚನೆಯಾಗುತ್ತದೆ. ಟ್ರಿಬ್ಯೂನಲ್ ರಚನೆಯ ನಂತರ ವಿವಾದ ಇತ್ಯರ್ಥಗೊಳ್ಳಲು ದಶಕಗಳೇ ಆಗುತ್ತವೆ. ಕರ್ನಾಟಕದಲ್ಲಿ 2-3 ದಶಕಗಳ ಅವಧಿಯ ಟ್ರಿಬ್ಯೂನಲ್ ಗಳು ಇವೆ. ಇಲ್ಲಿ ಜಲವಿವಾದಗಳಿಗೆ ಪರಿಹಾರ ದೊರೆಯದೇ ಕಗ್ಗಂಟಾಗಿ ಉಳಿಯುತ್ತದೆ. ಇದರಿಂದ ರಾಜ್ಯಗಳಿಗೆ ಜಲಸಂಪನ್ಮೂಲ ಪೋಲಾಗುತ್ತಿದೆ. ಈ ನಿಟ್ಟಿನಲ್ಲಿ ಬದಲಾವಣೆಗಳಿಗೆ ನಾವು ತೆರೆದುಕೊಳ್ಳದಿದ್ದರೆ ಸರ್ಕಾರ, ನ್ಯಾಯಮೂರ್ತಿಗಳು, ನ್ಯಾಯಾಂಗ ವ್ಯವಸ್ಥೆಗೂ ಕಷ್ಟವಾಗುತ್ತದೆ ಎಂದು ತಿಳಿಸಿದರು.

ನ್ಯಾಯ ಎನ್ನುವುದು ಸಮಾಜದಲ್ಲಿ ಕಷ್ಟದಿಂದ ಪಡೆಯುವ ಕೆಲಸವಾಗಬಾರದು. ಅದು ಸರಳವಾಗಿ ದೊರೆಯುವಂತಾಗಬೇಕು. ನೂತನ ತಂತ್ರಜ್ಞಾನದಿಂದ ಫಾಸ್ಟ್ ಟ್ರ್ಯಾಕ್ ಕೋರ್ಟ್, ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಆದರೆ ತಳಮಟ್ಟದಲ್ಲಿ ಕಕ್ಷಿದಾರನಿಗೆ ಕಾನೂನು ಮಾರ್ಗದರ್ಶನ ಹಾಗೂ ಸಹಕಾರ ಇನ್ನಷ್ಟು ಸಿಗುವ ಅವಶ್ಯಕತೆ ಇದೆ. ಈ ಹಿಂದೆ, ನ್ಯಾಯಸಮ್ಮತವಾದ ಸಮಾಜವಿದ್ದರೆ ನ್ಯಾಯಾಂಗ ವ್ಯವಸ್ಥೆ ಕಡಿಮೆಯಿದ್ದರೂ ನಡೆಯುತ್ತಿತ್ತು. ಆದರೆ ಈಗ ಅನ್ಯಾಯ ಮಾಡುವುದೇ ಸಹಜವೆಂಬಂತಹ ಪರಿಸ್ಥಿತಿ ಇರುವ ಕಾರಣ, ನ್ಯಾಯಾಂಗ ವ್ಯವಸ್ಥೆ ಮಧ್ಯೆ ಪ್ರವೇಶಿಸುವುದು ಅನಿವಾರ್ಯವಾಗಿದೆ ಎಂದರು.

RELATED ARTICLES

Related Articles

TRENDING ARTICLES