ರಾಯಚೂರು: ಕಾಂಗ್ರೆಸ್ ಸಮ್ಮುಖದಲ್ಲಿ ದೇಶದಲ್ಲಿ ಕನ್ಯಾಕುಮಾರಿಯಿಂದ ಹಿಡಿದು ಜಮ್ಮು ಕಾಶ್ಮೀರವರೆಗೆ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಈಗ ರಾಯಚೂರಿಗೆ ಎಂಟ್ರಿಯಾಗಿದ್ದು, ರಾಯಚೂರಿನ ಗಿಲ್ಲೇಸೂಗೂರಿನ ರೈತರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂವಾದ ನಡೆಸಿದ್ದಾರೆ.
ಇಂದು ರೈತರೊಂದಿಗೆ ಸಂವಾದದ ನಂತರ ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡಬಲ್ ಇಂಜಿನ್ ಸರ್ಕಾರದಲ್ಲಿ, ಎರಡೂ ಸರ್ಕಾರಗಳು ಕೆಲಸ ಮಾಡಬೇಕು. ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಜಾರಿಗಾಗಿ ಕಾಂಗ್ರೆಸ್ ಧ್ವನಿ ಎತ್ತಿತ್ತು. ಕಾಂಗ್ರೆಸ್ ಧ್ವನಿಗೆ ಮಣಿದು ಸುಗ್ರೀವಾಜ್ಞೆ ಮಾಡೋದಾಗಿ ಈಗಾಗಲೇ ರಾಜ್ಯ ಸರ್ಕಾರ ಹೇಳಿದೆ. ಅದನ್ನ ಕೂಡಲೇ ಕಾರ್ಯರೂಪಕ್ಕೆ ತರಬೇಕು ಎಂದರು.
ಕೇಂದ್ರ ಸರ್ಕಾರ ಮೂರು ವರ್ಷ ಅಧಿಕಾರ ನಡೆಸದೇ ಮಲಗಿದೆ. ಈಗ ಜನ ಕಿತ್ತೆಸೆಯಬೇಕು ಎಂದು ನಿರ್ಧಾರ ಮಾಡಿರುವ ಸಂದರ್ಭದಲ್ಲಿ ಸರ್ಕಾರ ಸುಗ್ರೀವಾಜ್ಞೆ ಎಸ್ಸಿ, ಎಸ್ಟಿ ಸಮಾಜದ ಮೀಸಲಾತಿ ಹೆಚ್ಚಳ ಬಗ್ಗೆ ತೀರ್ಮಾನ ಮಾಡಿದೆ. ಆ ಸಮುದಾಯಗಳ ಜನ, ಸ್ವಾಮೀಜಿಗಳು ಹಾಗೂ ಕಾಂಗ್ರೆಸ್ ಧ್ವನಿಗೆ ಮಣಿದು ಹಾವು ಸಾಯಬಾರದು, ಕೋಲು ಮುರಿಯಬಾರದು ಎನ್ನುವಂತೆ ಮಾಡಿದ್ದೀರ, ಮೊಸಳೆ ಕಣ್ಣೀರಾಕಿ ಜನರ ಜೊತೆ ಆಟ ಆಡಬೇಡಿ. ನಿಮಗೆ ಈ ಜನಗಳ ಬಗ್ಗೆ ಕಾಳಜಿ ಇಲ್ಲ, ನಿಮಗೆ ಬದ್ದತೆ ಇಲ್ಲ ಎಂದು ಮಾತಿನುದ್ದಕ್ಕೂ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೀಸಲಾತಿ ಬಗ್ಗೆ ಕಾಂಗ್ರೆಸ್ ಬೆಳಗಾವಿ ಅಧಿವೇಶನದಲ್ಲಿ ಹೇಳಿದ್ರೂ ಏನೂ ಮಾಡಲಿಲ್ಲ. ಹಿಂದುಳಿದ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ ಅನ್ಯಾಯ ಮಾಡಿದ್ದೀರಿ? ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಕೂಡಲೇ ಜಾರಿಗೆ ತರುವಂತೆ ಒತ್ತಾಯ ಮಾಡಲಾಗಿದೆ. ಮೊದಲು ನೀವು ನುಡಿದಂತೆ ನಡೆಯಬೇಕು, ಕಾರ್ಯರೂಪಕ್ಕೆ ತರಬೇಕು ನಿಮ್ಮ ಕೈಯಲ್ಲೇ ಅಧಿಕಾರ ಇದೆ. ಅದನ್ನ ಮಾಡಿ ಎಂದು ಮೀಸಲಾತಿ ಬಗ್ಗೆ ಕಾಂಗ್ರೆಸ್ ನಾಯಕರು ಹೇಳಿದರು.