ನವದೆಹಲಿ : ಕಾಂಗ್ರೆಸ್ ಮುಳುಗುವ ಹಡಗು. ಆ ಪಕ್ಷಕ್ಕೆ ಒಬ್ಬ ಪರ್ಮನೆಂಟ್ ಅಧ್ಯಕ್ಷ ಇಲ್ಲ ಎಂಬ ಚರ್ಚೆಗೆ ಇನ್ಮೇಲೆ ಅಧಿಕೃತ ಬ್ರೇಕ್ ಬಿದ್ದಿದೆ. ಕಳೆದ ಕೆಲ ವರ್ಷಗಳಿಂದ ಚರ್ಚೆಗೆ ಕಾರಣವಾಗಿದ್ದ ಎಐಸಿಸಿ ಅಧ್ಯಕ್ಷಗಾದಿ ಕೊನೆಗೂ ಭರ್ತಿಯಾಗಿದೆ. ಕಳೆದ ಲೋಕಸಭೆ ಚುನಾವಣೆ ಬಳಿಕ ಮಧ್ಯಂತರ ಅಧ್ಯಕ್ಷರಾಗಿ ಗಾಂಧಿ ಕುಟುಂಬವೇ ಕಾರ್ಯ ನಿರ್ವಹಿಸುತ್ತಿತ್ತು. ಅಧ್ಯಕ್ಷಗಾದಿಯ ವಿಚಾರ ವಿಪಕ್ಷಗಳಿಗೆ ಸದಾ ಆಹಾರವಾಗ್ತಿತ್ತು. ಇದರಿಂದ ಸಾಕಷ್ಟು ಬಾರಿ ಕಾಂಗ್ರೆಸ್ ಮುಜುಗರ ಎದುರಿಸಿದ ಸನ್ನಿವೇಶಗಳು ಇವೆ. ಕಾಂಗ್ರೆಸ್ ಹಿರಿಯ ನಾಯಕ ಸೀತಾರಾಮ್ ಕೇಸರಿಯವರ ಬಳಿಕ ಇಪ್ಪತ್ತು ನಾಲ್ಕು ವರ್ಷಗಳ ನಂತರ ಕಾಂಗ್ರೆಸ್‌ಗೆ ಮೊದಲ ಗಾಂಧಿಯೇತರ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. 1975ರಲ್ಲಿ ಎಸ್. ನಿಜಲಿಂಗಪ್ಪ ಎಐಸಿಸಿ ಅಧ್ಯಕ್ಷರಾಗಿದ್ರು. ಬಳಿಕ ಮಲ್ಲಿಕಾರ್ಜುನ ಖರ್ಗೆಗೆ ಅಧ್ಯಕ್ಷಗಾದಿ ಒಲಿದಿದೆ.
ಈ ಮೂಲಕ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿದ ಎರಡನೇ ಕನ್ನಡಿಗ ಖರ್ಗೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಸಲದ ಚುನಾವಣೆಯ ಫಲಿತಾಂಶಗಳನ್ನು ನೋಡೋದಾದ್ರೆ, ಇದುವರೆಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ 6 ಬಾರಿ ಚುನಾವಣೆ ನಡೆದಿತ್ತು. ಈ ಸಲದ ಚುನಾವಣೆ ಫಲಿತಾಂಶ ತಾಳೆ ಮಾಡೊದಾದ್ರೆ, ಬರೋಬ್ಬರಿ 7,897 ಮತಗಳನ್ನು ಪಡೆದ ಖರ್ಗೆ ಗೆಲುವಿನ ನಗೆ ಬೀರಿದ್ರು. ಇನ್ನೂ ತರೂರ್ ಕೇವಲ 1,072 ಮತಗಳನ್ನು ಪಡೆದಿದ್ದಾರೆ. ಒಟ್ಟು 9,385 ಮತಗಳು ಚಲಾವಣೆಯಾಗಿದ್ದು, ಅದರಲ್ಲೂ ಪೈಕಿ 416 ಮತಗಳು ಅಮಾನ್ಯವಾಗಿದ್ದವು.
ಎಐಸಿಸಿ ಅಧ್ಯಕ್ಷರಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಆಗಿದ್ದ ತಡ, ಗಣ್ಯರ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಸೋನಿಯಾಗಾಂಧಿ, ಪ್ರಿಯಾಂಕ ಗಾಂಧಿ ಎದುರಾಳಿ ಶಶಿ ತರೂರ್ ಖರ್ಗೆ ನಿವಾಸಕ್ಕೆ ಆಗಮಿಸಿ ಅಭಿನಂದಿಸಿದ್ರು.
ಇನ್ನೂ ಉಳಿದಂತೆ ರಾಹುಲ್ ಗಾಂಧಿ, ರಾಜ್ಯ ನಾಯಕರಾದ ಡಿಕೆಶಿ, ಸಿದ್ದರಾಮಯ್ಯ, ಜೆಡಿಎಸ್ ಹಿರಿಯ ನಾಯಕ ದೇವೇಗೌಡ ಸೇರಿದಂತೆ ಹಲವು ಗಣ್ಯರು ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಇತ್ತ, ರಾಜ್ಯದಲ್ಲೂ ಮಲ್ಲಿಕಾರ್ಜುನ ಖರ್ಗೆ ಗೆಲುವಿಗೆ ಸಂಭ್ರಮ ಜೋರಾಗಿತ್ತು.. ವಿವಿಧ ಜಿಲ್ಲೆಗಳಲ್ಲಿ ಖರ್ಗೆ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ರು.. ಜೊತೆಗೆ, ಕೆಪಿಸಿಸಿ ಕಚೇರಿಯಲ್ಲೂ ಸಡಗರ ಜೋರಾಗಿತ್ತು.
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಹಿನ್ನೆಲೆ ಖರ್ಗೆ ನೂರಾರು ಸವಾಲುಗಳನ್ನು ಎದುರಿಸಬೇಕಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ. ಸತತ ಸೋಲುಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಕುಸಿದಿದೆ. ಹಾಗಾಗಿ ಇದೀಗ ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೆ ಸಂಘಟನೆ ಶಕ್ತಿ ತುಂಬವ ಕೆಲಸ ಖರ್ಗೆ ಮಾಡಬೇಕಿದೆ. ಗಾಂಧಿ ಕುಟುಂಬದ ರಬ್ಬರ್ ಸ್ಟಾಂಪ್ ಅಧ್ಯಕ್ಷ ಎಂಬ ಹಣೆಪಟ್ಟಿ ಕಳಚಬೇಕಿದೆ. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲು ಆಗಿರುವುದು ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ತಿಳಿಗೊಳಿಸಬೇಕಿದೆ. ಹೀಗೆ ನೂರಾರು ಸವಾಲುಗಳಿವೆ.
ಕಾಂಗ್ರೆಸ್ ಪಕ್ಷಕ್ಕೆ 137 ವರ್ಷಗಳ ಸುದೀರ್ಘ ಇತಿಹಾಸವಿದೆ. ಈ ಅವಧಿಯಲ್ಲಿ ಕೇವಲ 6 ಬಾರಿ ಮಾತ್ರ ಅಧ್ಯಕ್ಷ ಗಾದಿಗೆ ಚುನಾವಣೆ ನಡೆದಿದೆ. 1998ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು ಜಿತೇಂದ್ರ ಪ್ರಸಾದ್ ಅವರನ್ನು ಸೋಲಿಸಿದ್ದರು. ಡಿಸೆಂಬರ್ 2017ರಲ್ಲಿ ರಾಹುಲ್ ಗಾಂಧಿಗೆ ಸೋನಿಯಾ ಅಧ್ಯಕ್ಷ ಗಾದಿ ಬಿಟ್ಟುಕೊಟ್ಟಿದ್ದರು. 2019ರಲ್ಲಿ ರಾಹುಲ್ ಗಾಂಧಿ ರಾಜೀನಾಮೆ ಕೊಟ್ಟ ನಂತರ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆಯಾಗಿ ಪಕ್ಷವನ್ನು ಮುನ್ನಡೆಸುತ್ತಿದ್ದರು. ಸದ್ಯ ಕನ್ನಡಿಗ ಕಾಂಗ್ರೆಸ್‌ಗೆ ಕಿಂಗ್ ಆಗಿರೋದು ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ.
ಸಂತೋಷ್ ಹೊಸಹಳ್ಳಿ, ಪವರ್ ಟಿವಿ, ನವದೆಹಲಿ.