ಬೆಂಗಳೂರು : ಕಷ್ಟ ಯಾರಿಗೆ ಬರೋಲ್ಲ ಹೇಳಿ ಕೋಟಿ ಕೋಟಿ ಆಸ್ತಿ ಇದ್ದರೂ ಸಮಯಕ್ಕೆ ಬೇಕೆಂದಾಗ ಹಣದ ವ್ಯವಸ್ಥೆ ಆಗಲಿಲ್ಲ ಅಂದ್ರೆ ಸಿರಿವಂತರೇ ಬೆಲೆಬಾಳುವ ವಸ್ತುಗಳನ್ನ ಅಡ ಇಡ್ತಾರೆ. ಹೀಗೆ ಕಾರುಗಳನ್ನ ಇಟ್ಟುಕೊಂಡು ಸಾಲ ಕೊಡುವವರೇ ಅದನ್ನು ಮಾಲೀಕರಿಗೆ ತಿಳಿಯದಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಬಿಡ್ತಾರೆ. ನಗರದಲ್ಲಿ ಸಕ್ರಿಯವಾಗಿದ್ದ ಇಂತಹದೊಂದು ಗ್ಯಾಂಗ್ ಅನ್ನ ಈಗ ಪುಲಕೇಶಿನಗರ ಪೊಲೀಸ್ರು ಬಂಧಿಸಿದ್ದಾರೆ. ಮನೀಶ್ ಗಜೇಂದ್ರ, ಸೈಯದ್ ಹಾಗೂ ಜಾಬಿರ್ ಶರೀಫ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 6 ಕೋಟಿಗೂ ಅಧಿಕ ಮೌಲ್ಯದ 14 ಹೈ ಎಂಡ್ ಕಾರುಗಳನ್ನು ಪುಲಕೇಶಿನಗರ ಪೊಲೀಸ್ರು ವಶಪಡಿಸಿಕೊಂಡಿದ್ದಾರೆ.
ಮನೀಷ್ ಗಜೇಂದ್ರ ಹಾಗೂ ಸೈಯದ್ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ಗಳಾಗಿದ್ದು, ತಮ್ಮ ಬಳಿ ಅಡವಿಡುವ ಶ್ರೀಮಂತರ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಹೈ ಎಂಡ್ ಕಾರುಗಳನ್ನು ಮಾಲೀಕರಿಗೆ ತಿಳಿಯದಂತೆ ಬೇರೆಯವರಿಗೆ ಮಾರಿ ಬಿಡುತ್ತಿದ್ದರು. ಇನ್ನು ಬೆಂಗಳೂರಿನ ಕಾರನ್ನು ಹೈದರಾಬಾದ್, ದೆಹಲಿ ಸೇರಿ ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇನ್ನು ಹೀಗೆ ಟಿಟಿಡಿ ಮುಖ್ಯಸ್ಥರಾಗಿದ್ದ ಆದಿಕೇಶವುಲು ಮೊಮ್ಮಗ ಗೀತ ವಿಷ್ಣು ಸಹ ಕಷ್ಟ ಅಂತ 20 ಲಕ್ಷಕ್ಕೆ ತಮ್ಮ ಹೈ ಎಂಡ್ ಕಾರನ್ನು ಅಡವಿಟ್ಟಿರುತ್ತಾರೆ. ಈ ಕಾರನ್ನು ಅವರು ಸಾಲ ತೀರಿಸಿ ಬಿಡಿಸಿಕೊಳ್ಳಲು ಹೋದಾಗ ಅದನ್ನು ಬೇರೆಯವರಿಗೆ ಮಾರಾಟ ಮಾಡಿರುವ ವಿಷಯ ಬೆಳಕಿಗೆ ಬರುತ್ತದೆ. ವಿಷಯ ತಿಳಿದ ಕೂಡಲೇ ಗೀತ ವಿಷ್ಣು ಕಾರಿನ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈಗ ಬಂಧಿಸಿರುವ ಆರೋಪಿಗಳ ಬಳಿಯಿಂದಲೇ ಗೀತ ವಿಷ್ಣುಗೆ ಸೇರಿದ ಕಾರನ್ನು ಹೈದರಾಬಾದಿನಲ್ಲಿ ರಿಕವರಿ ಮಾಡಲಾಗಿದೆ.
ಬಂಧಿತ ಆರೋಪಿಗಳು ಕಾರನ್ನ ಮಾರಾಟ ಮಾಡುವಾಗ ನಂಬರ್ ಪ್ಲೇಟ್ ಹಾಗೂ ಫಾರ್ಮ್ 29-30 ಯನ್ನ ನಕಲು ಮಾಡಿ ಮಾರಾಟ ಮಾಡುತ್ತಿದ್ದರು. ಒಂದು ವೇಳೆ ಈ ಕಾರುಗಳನ್ನ ಪೊಲೀಸ್ರು ಹಿಡಿದರೂ ಅವರಿಗೆ ಇದು ಕದ್ದ ಕಾರು ಅನ್ನೋದು ಗೊತ್ತೇ ಆಗುತ್ತಿರಲಿಲ್ಲ. ಆರೋಪಿಗಳಲ್ಲಿ ಒಬ್ಬನಾಗಿರುವ ಜಾಬಿರ್ ಶರೀಫ್ ವೃತ್ತಿಯಲ್ಲಿ ಕಳ್ಳನಾಗಿದ್ದು ಕದ್ದ ಕಾರುಗಳನ್ನೂ ಹೀಗೆ ಮಾರಾಟ ಮಾಡುತ್ತಿದ್ದ ಅನ್ನೋದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಅಶ್ವಥ್ ಎಸ್. ಎನ್ . ಕ್ರೈಂ ಬ್ಯೂರೋ ಪವರ್ ಟಿವಿ