Friday, November 22, 2024

ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಸಿದ್ದತೆ; ನಾಳೆ ಗರ್ಭಗುಡಿಯ ಬಾಗಿಲು ಓಪನ್

ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಸಿದ್ದತೆ.. ನಾಳೆ ಗರ್ಭಗುಡಿಯ ಬಾಗಿಲು ಓಪನ್

ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸೋ ಹಾಸನಾಂಬೆ ತಾಯಿ ಜಾತ್ರಾ ಮಹೋತ್ಸವಕ್ಕೆ ನಾಳೆ ವಿದ್ಯುಕ್ತ ಚಾಲನೆ ದೊರೆಯಲಿದೆ.‌ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಅಧಿಕಾರಿಗಳ‌ ಸಮ್ಮುಖದಲ್ಲಿ ಪುರೋಹಿತರು ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲನ್ನ ತೆರೆಯುತ್ತಾರೆ. ಈಗಾಗಲೇ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದ್ದು, ಇಂದು ಅಂತಿಮ ಹಂತದ ಸಿದ್ದತೆಗಳನ್ನು ನಡೆಸಲಾಯಿತು.

ಪವಾಡ ಕ್ಷೇತ್ರ, ವರ್ಷಕ್ಕೆ ದರ್ಶನ‌ ನೀಡೋ ಹಾಸನಾಂಬೆಯ ಗರ್ಭಗುಡಿಯ ಜಾತ್ರಾ ಮಹೋತ್ಸವ ನಾಳೆಯಿಂದ ಅಕ್ಟೋಬರ್ 27 ರ ವರೆಗೆ ನಡೆಯಲಿದೆ. ಪ್ರತೀ ವರ್ಷವೂ ಆಶ್ವೀಜ ಮಾಸದ ಹುಣ್ಣಿಮೆ ನಂತರ ಬರುವ ಮೊದಲ ಗುರುವಾರ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಅದರಂತೆ ನಾಳೆ ಮಧ್ಯಾಹ್ನ 12.30 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಜಿಲ್ಲಾಧಿಕಾರಿ ಎಂಎಸ್ ಅರ್ಚನಾ ಸೇರಿದಂತೆ ಅಧಿಕಾರಿಗಳ ನೇತೃತ್ವದಲ್ಲಿ ಪುರೋಹಿತರು ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ತೆರೆಯಲಿದ್ದಾರೆ.

ಅರಸು ಮನೆತನದವರು ದೇವಾಲಯದ ಮುಂಭಾಗ ಬಾಳೆಕಂಬ ಕಡಿಯುತ್ತಿದ್ದಂತೆ, ಗರ್ಭಗುಡಿಯ ಬಾಗಿಲು ತೆಗೆಯಲಾಗುತ್ತದೆ. ನಾಳೆ, ಅಂತಿಮ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರೋದಿಲ್ಲ, ಈ ಭಾರಿ ಒಂದು ದಿನ ಗ್ರಹಣ ಬಂದಿದ್ದು, ಆ ದಿನವೂ ಕೂಡಾ ಸಾರ್ವಜನಿಕರಿಗೆ ಅವಕಾಶವಿರೋದಿಲ್ಲ. ಉಳಿದಂತೆ ಎಲ್ಲಾ ದಿನಗಳು ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಕೊರೊನಾ ನಂತರದ ಜಾತ್ರಾ ಮಹೋತ್ಸವ ಆದ್ದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಹಿರಿದು ಬರೋ ನಿರೀಕ್ಷೆ ಇದೆ.‌ ಈ‌ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಜಿಲ್ಲಾಡಳಿತ‌‌ ಮಾಡಿಕೊಂಡಿದೆ.

ಈ ಭಾರಿ ಅದ್ದೂರಿ ಜಾತ್ರಾ ಮಹೋತ್ಸವ ನಡೆಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದ್ದು, ಪುಷ್ಪಾಲಂಕಾರ, ವಿದ್ಯುತ್ ಅಲಂಕಾರ‌ ಸೇರಿದಂತೆ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ. ಇನ್ನು ಭಕ್ತರು ಸರತಿ ಸಾಲಿನಲ್ಲಿ ಬಂದು ದೇವಿ ದರ್ಶನ‌ ಪಡೆಯುವುದಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ.‌ ಹಾಸನಾಂಬ ದೇವಾಲಯದ ಮುಂಭಾಗ ಮುಖ್ಯದ್ವಾರ ಹಾಗೂ ವಿಶೇಷವಾಗಿ ಸ್ವಾಗತ ಕಮಾನನ್ನ ಹಾಕಿದ್ದಾರೆ.

ಇದಲ್ಲದೇ ಮೈಸೂರು ದಸರಾ ಮಾದರಿಯಲ್ಲಿಯೇ ನಗರದ ತುಂಬೆಲ್ಲಾ ವಿದ್ಯುತ್ ದೀಪಾಲಂಕಾರಗಳನ್ನು ಮಾಡಲಾಗಿದೆ.‌ ಹಾಸನಾಂಬ ಗರ್ಭಗುಡಿಯ ಮುಂಭಾಗ ವಿವಿಧ ತರಕಾರಿಗಳಲ್ಲಿ ಸಿಂಗರಿಸುತ್ತಿದ್ದು, ಹಾಸನನಾಂಬ, ಸಿದ್ದೇಶ್ವರ ಹಾಗೂ ದೇವಾಲಯದ ಮುಂಭಾಗದ ಸ್ವಾಗತ ಕಮಾನು ಬಳಿ ವಿವಿಧ ಹೂಗಳನ್ನು ಬಳಿಸಿ, ವಿಶೇಷವಾದ ವರ್ಣರಂಜಿತವಾದ ಅಲಂಕಾರವನ್ನ ಮಾಡಲಾಗುತ್ತಿದೆ.

ಸಾರ್ವಜನಿಕರಿಗೆ ಉಚಿತವಾಗಿ ದರ್ಶನ ವ್ಯವಸ್ಥೆಯಲ್ಲದೇ, ವಿಶೇಷ ದರ್ಶನಕ್ಕೆ 1000 ಹಾಗೂ 300 ರೂಪಾಯಿ ಟಿಕೆಟ್ ಗಳನ್ನು ಮಾಡಲಾಗಿದೆ.‌ ಇವೆಲ್ಲವುಗಳ ಹೊರತಾಗಿ ಬಂದ ಭಕ್ತರಿಗೆ ಶೌಚಾಲಯ, ನೀರು, ಪಾರ್ಕಿಂಗ್ ಸೇರಿದಂತೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು ಅಂತಾ ಜಿಲ್ಲಾಡಳಿತ ಹೇಳಿದೆ.

ಸಚಿನ್ ಶೆಟ್ಟಿ, ಪವರ್ ಟಿವಿ. ಹಾಸನ

RELATED ARTICLES

Related Articles

TRENDING ARTICLES