Friday, November 22, 2024

ರಾಮನಗರದಲ್ಲಿ ಮುಂದುವರೆದ ಕಾಡಾನೆಗಳ ಉಪಟಳ

ರಾಮನಗರ : ಸಾಲು ಸಾಲಾಗಿ ಓಡಾಡ್ತಿರೋ ಕಾಡಾನೆಗಳು. ಮತ್ತೊಂದು ಕಡೆ ರೈತರು ಬೆಳೆದ ಬೆಳೆ ನಾಶ. ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಕಾಡಾನೆಗಳ ಉಪಟಳದ ವಿಡಿಯೋ.. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಎನ್.ಆರ್. ಕಾಲೋನಿ ಗ್ರಾಮದ ಬಳಿ.

ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಕಾಟ ಇನ್ನೂ ತಪ್ಪಲಿಲ್ಲ. ಹಲವು ಬಾರಿ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಿದ್ರೂ, ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಿರುವ ಎನ್.ಆರ್.ಕಾಲೋನಿ, ಬಿ.ವಿ ಹಳ್ಳಿ, ತೆಂಗಿನಕಲ್ಲು ಗ್ರಾಮಗಳ ರೈತರ ಗೋಳು ಹೇಳತೀರದು. 7 ಕಾಡಾನೆಗಳ ದಂಡು, ಗ್ರಾಮಕ್ಕೆ ಬಂದು ಅವಾಂತರಗಳನ್ನೇ ಸೃಷ್ಟಿ ಮಾಡಿದೆ. ರೈತರು ಬೆಳೆದಿದ್ದ ಟೊಮ್ಯಾಟೊ, ತೆಂಗು, ಬಾಳೆ ಬೆಳೆ ಸೇರಿದಂತೆ ಲಕ್ಷಾಂತರ ಮೌಲ್ಯದ ಬೆಳೆಗಳನ್ನು ನಾಶ ಮಾಡಿ ರೈತರ ಬದುಕಿನ ಮೇಲೆ ಬರೆ ಎಳೆದಿದೆ.

ಅಂದಹಾಗೆ ಕಳೆದ ಮೂರು ದಿನಗಳ ಹಿಂದೆ ಕಾಡಾನೆಗಳ‌ ದಂಡು ದೊಡ್ಡ ಮಣ್ಣುಗುಡ್ಡೆ ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದು, ಆ ಭಾಗದ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದ್ದವು. ತದನಂತರ ಆನೆಗಳನ್ನು ಕಾಡಿನತ್ತ ಓಡಿಸಲು ಪ್ರಯತ್ನಪಟ್ರು ಸಾಧ್ಯವಾಗಿರಲಿಲ್ಲ. ಇದೀಗ ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ಆನೆಗಳನ್ನಟ್ಟುವ ಕೆಲಸ ಮಾಡಲಾಗುತ್ತಿದೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಸುತ್ತ ಸೋಲಾರ್ ತಂತಿ ಬೇಲಿ ನಿರ್ಮಿಸುವ ಕೆಲಸ ಕೂಡ ಇನ್ನೂ 15 ದಿನಗಳಲ್ಲಿ ಆರಂಭವಾಗಲಿದೆ. ಕಾಡಾನೆಗಳು ಗ್ರಾಮಗಳತ್ತ ಸುಳಿಯದ ರೀತಿ‌ ಕ್ರಮ ವಹಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ನಿರಂತರ ಕಾಡಾನೆಗಳ ಹಾವಳಿಯಿಂದಾಗಿ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವ ಜೊತೆಗೆ ಆನೆಗಳು ಗ್ರಾಮಗಳತ್ತ ಸುಳಿಯದ ರೀತಿ ಅಗತ್ಯ ಕ್ರಮ ವಹಿಸಬೇಕಾಗಿದೆ.

ಪ್ರವೀಣ್ ಎಂ.ಎಚ್. ಪವರ್ ಟಿವಿ, ರಾಮನಗರ

RELATED ARTICLES

Related Articles

TRENDING ARTICLES