ಕೊಪ್ಪಳ; ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ನಾಲ್ಕು ಜನ ಮಹಿಳೆಯರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಂಕನೂರು ಗ್ರಾಮದಲ್ಲಿ ನಡೆದಿದೆ.
ನಿನ್ನೆ ಸಂಜೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರಿನಿಂದ 20 ಹೆಚ್ಚು ಜನರು ಸಂಕನೂರು ಕ್ರಾಸ್ ಬಳಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಹತ್ತಿ ಬೀಜ ಸಂಸ್ಕರಣಾ ಘಟಕದಲ್ಲಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬರುವಾಗ ಭಾರಿ ಮಳೆಯಾಗಿದೆ. ಮಳೆಯಿಂದಾಗಿ ಸಂಕನೂರು ಹಳ್ಳವು ರಭಸವಾಗಿ ಹರಿಯುತ್ತಿತ್ತು. ಈ ಸಂದರ್ಭದಲ್ಲಿ ಕೂಲಿಕಾರರನ್ನು ಕರೆದುಕೊಂಡು ಹೋಗಿದ್ದ ವಾಹನ ಚಾಲಕ ಹಳ್ಳ ದಾಟಲು ಅಸಾಧ್ಯ ಎಂಬ ಕಾರಣಕ್ಕೆ ಹಳ್ಳದ ದಡದಲ್ಲಿಯೇ ವಾಹನ ನಿಲ್ಲಿಸಿದ್ದ. ಈ ಸಂದರ್ಭದಲ್ಲಿ ಒಂದಿಷ್ಟು ಜನ ಕೂಲಿಕಾರರು ಹೇಗೊ ಹಳ್ಳ ದಾಟಿದರು.
ಆದರೆ ಭುವನೇಶ್ವರಿ, ಗಿರಿಜಾ, ಪವಿತ್ರಾ ಮತ್ತು ವೀಣಾ ಹಳ್ಳ ದಾಟಲು ಆಗದೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಭುವನೇಶ್ವರಿ ಹಾಗೂ ಗಿರಿಜಾ ಹಳ್ಳದಲ್ಲಿ ಬೇಲಿಯಲ್ಲಿ ಸುಮಾರು 2 ಗಂಟೆ ನಿಂತುಕೊಂಡಿದ್ದರು. ಸ್ಥಳೀಯರು ಅವರನ್ನು ರಕ್ಷಣೆ ಮಾಡಲು ಹರಸಾಹಸ ಮಾಡಿದರೂ ಪ್ರಯೋಜನಾಗಲಿಲ್ಲ. ಇಂದು ಬೆಳಿಗ್ಗೆ ಕಂದಾಯ ಇಲಾಖೆ, ಪೊಲೀಸ್, ಎನ್ಡಿಆರ್ಎಫ್ ತಂಡ ಮೃತರ ಶವಗಳನ್ನು ಹಳ್ಳದಲ್ಲಿ ಪತ್ತೆ ಮಾಡಿದೆ. ನಾಲ್ಕೂ ಜನರ ಶವ ಪತ್ತೆಯಾಗಿದೆ. ಮೃತರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸಚಿವ ಹಾಲಪ್ಪ ಆಚಾರ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಗ್ರಾಮಸ್ಥರನ್ನು ಸಮಾಧಾನಪಡಿಸಿದ ಸಚಿವ ಹಾಲಪ್ಪ ಆಚಾರ್, ಎನ್ ಡಿಆರ್ ಎಫ್ ನಿಯಮಗಳಂತೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ನೀಡಲಾಗುವುದು. ಗ್ರಾಮಕ್ಕೆ ಆದಷ್ಟು ಬೇಗ ಸೇತುವೆ ನಿರ್ಮಾಣಕ್ಕೆ ಕ್ರಮವಹಿಸುವ ಭರವಸೆ ನೀಡಿದರು.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹಳ್ಳ ಹರಿಯುವುದರಿಂದ ಮಳೆಗಾಲದಲ್ಲಿ ಇದು ಸಮಸ್ಯೆಯೇ. ಇದಕ್ಕೆ ಒಂದು ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರ ಅನೇಕ ವರ್ಷಗಳ ಬೇಡಿಕೆಯನ್ನು ಕಿವಿಗೆ ಹಾಕಿಕೊಳ್ಳದೆ ಇರೋದು ದುರಂತಕ್ಕೆ ಕಾರಣ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಶುಕ್ರಾಜ್ ಕುಮಾರ್ ಪವರ್ ಟಿವಿ ಕೊಪ್ಪಳ