Sunday, November 24, 2024

ಕೋಮು ಗಲಭೆಗಳಿಗೆ ಮುಲಾಮು ಆಗಲಿದೆ ‘ತೋತಾಪುರಿ’ ಚಿತ್ರ.!

ಬೆಂಗಳೂರು: ಇಡೀ ರಾಜ್ಯ ಇಂದು ಉಪ್ಪು ಉಳಿ ಖಾರ ಬೆರೆಸಿದ ತೋತಾಪುರಿ ಹಣ್ಣನ್ನು ಬಾಯಿ ಚಪ್ಪರಿಸಿ ಸವಿದಿದೆ. ​​​​ನಾಟಿ, ಘಾಟಿ ಸಂಭಾಷಣೆಗಳ ಮೂಲಕ ಜಗ್ಗೇಶ್​​​, ಅದಿತಿ ಎಲ್ಲರ ದಿಲ್ ದೋಚಿದ್ದಾರೆ. ಅನ್​ ಸೀಸನ್​ ಮಾವು ತೋತಾಪುರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಬಂದಿದ್ದು, ಹೌಸ್​​ಫುಲ್​ ಪ್ರದರ್ಶನ ಕಾಣುತ್ತಿದೆ.

ಕೋಮು ಗಲಭೆಗಳಿಗೆ ಮುಲಾಮು ಆಗಲಿದೆ ‘ತೋತಾಪುರಿ’

ಇಡೀ ಸಿನಿ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ಯಾನ್​ ಇಂಡಿಯಾ ಕಾಮಿಡಿ ಕನ್ನಡ ಸಿನಿಮಾ ಬರುತ್ತಿದೆ ಎಂದಾಗಲೇ ತೋತಾಪುರಿ ಎಲ್ಲರ ಗಮನ ಸೆಳೆದಿತ್ತು. ಚೇಷ್ಠೆಗಳ ಚೇರ್ಮನ್​​​, ಪೋಲಿ ಜೋಕುಗಳ ಜಮೀನ್ದಾರ್​​​ ವಿಜಯ್​ ಪ್ರಸಾದ್​​ ಕೊಟ್ಟಿದ್ದ ಸ್ಯಾಂಪಲ್​ ತೋತಾಪುರಿಯನ್ನ ತಿಂದಾಗ್ಲೇ ಬಾಯಲ್ಲಿ ನೀರೂರಿತ್ತು. ಇದೀಗ ವರ್ಲ್ಡ್​​ ವೈಡ್​​ ಅನ್​ ಸೀಸನ್​ ತೋತಾಪುರಿ ಹಲ್​ಚಲ್​ ಎಬ್ಬಿಸ್ತಿದೆ.

ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಥಿಯೇಟರ್​​ ಮುಂದೆ ಡೊಳ್ಳು, ತಮಟೆ, ಕುಣಿತದೊಂದಿಗೆ ಪ್ಯಾನ್​ ಇಂಡಿಯಾ ತೋತಾಪುರಿಯನ್ನು ಗ್ರ್ಯಾಂಡ್​​ ಆಗಿ ವೆಲ್​ಕಮ್​​ ಮಾಡಲಾಗಿದೆ. ಎಲ್ಲರ ಹೃದಯದ ಚಿಲ್ಕ ಟೈಟಾಗಿದ್ದರು, ಬಾಗಿಲು ತೆರೆಸಿ ನೀತಿ ಪಾಠ ಹೇಳಿದ ತೋತಾಪುರಿ ಚಿತ್ರಕ್ಕೆ ಚಿತ್ರಪ್ರೇಮಿಗಳು ಹ್ಯಾಟ್ಸ್​ ಆಫ್​ ಹೇಳ್ತಿದ್ದಾರೆ. ನವರಸಗಳ ಮಸಾಲೆ ಬೆರೆಸಿ ಹದವಾಗಿ ಮಾಗಿದ ಹಣ್ಣನ್ನು ಪ್ರೇಕ್ಷಕರ ಮುಂದೆ ನಿರ್ದೇಶಕ ವಿಜಯ್​ ಪ್ರಸಾದ್ ಇಟ್ಟಿದ್ದಾರೆ.

ತೋತಾಪುರಿ ಸ್ಟೋರಿಲೈನ್

ಆಡು ಮುಟ್ಟದ ಸೊಪ್ಪಿಲ್ಲ, ಜಗ್ಗೇಶ್​​ ಮಾಡದೇ ಇರೋ ಪಾತ್ರವಿಲ್ಲ. ಸೀರಿಯಸ್​ ರಾಜಕಾರಣಿ ಜಗ್ಗೇಶ್,​​​ ತೆರೆ ಮೇಲೆ ಪೋಲಿ ನಟನಾಗಿ ಪರಕಾಯ ಪ್ರವೇಶ ಮಾಡಿರುವ ಶೈಲಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಇದೀಗ ತೋತಾಪುರಿ ಚಿತ್ರದಲ್ಲಿ ಸ್ಲೀವ್​ಲೆಸ್​​ ಸಂಭಾಷಣೆಯ ಮೂಲಕ ಕೂತವರ ಸೊಂಟ ಚಿವುಟಿದ್ದಾರೆ. ಚಿತ್ರದಲ್ಲಿ ಮಾತುಗಳಿಗೆ ಅರೆಬರೆ ಬಟ್ಟೆ ತೊಡಿಸಿ, ಬೆತ್ತಲೆ ಡೈಲಾಗ್​ಗಳ ಮೂಲಕ ಕತ್ತಲೇ ಹೋಗಲಾಡಿಸಿದ್ದಾರೆ. ಈ ಕಥೆಗೆ ಆದಿಯೂ ಇಲ್ಲ. ಅಂತ್ಯವೂ ಇಲ್ಲ.

ವಾಸ್ತವತೆಗೆ ತೀರಾ ಹತ್ತಿರವಾಗಿರುವ ತೋತಾಪುರಿ ಹೃದಯ ಹಿಂಡೋ ಡೈಲಾಗ್​ಗಳಿಂದಲೇ ವೆರಿ ಕಾಸ್ಟ್ಲಿ ಎನಿಸುತ್ತದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಜನಾಂಗವನ್ನು ಪ್ರತಿನಿಧಿಸುವ ಮೂರು ಪಾತ್ರಗಳು ಕಥೆಯನ್ನು ನಿರೂಪಿಸುತ್ತವೆ. ಇದೊಂದು ತೊಟ್ಟು-ಬೊಟ್ಟಿನ ಕಥೆಯಾಗಿದೆ. ಟೈಲರ್​ ಮಷಿನ್​​​, ರವಿಕೆ, ದೊನ್ನೆ ಬಿರಿಯಾನಿ, ತೋತಾಪುರಿ ಇವೇ ಚಿತ್ರದ ಮೈನ್​ ಹೈಲೈಟ್ಸ್​​​​. ಈರೇಗೌಡನಾಗಿ ಜಗ್ಗೇಶ್​​, ಶಕೀಲಾ ಭಾನು ರೋಲ್​​ನಲ್ಲಿ ಅದಿತಿ, ಅಸಿಸ್ಟೆಂಟ್​​ ನಂಜಮ್ಮ ಮಡಿ, ಮೈಲಿಗೆ, ಧರ್ಮದ ಆಚರಣೆಗಳನ್ನು ಪ್ರಶ್ನೆ ಮಾಡಿದ್ದಾರೆ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದ ತೋತಾಪುರಿ ಸಂಸಾರ, ಬೆಣ್ಣೆಯಂತ ಮನಸ್ಸಿನ ದೊನ್ನೆ ರಂಗಮ್ಮ, ಟೈಲರ್​ ಜಗ್ಗಣ್ಣ ಇವ್ರೆಲ್ಲರ ಸದ್ದಿನ ಜತೆಗೆ ಮದ್ದಿನ ಔಷಧಿ ತೋತಾಪುರಿ ಆಗಿದೆ.

ನೀವು ಎಳೆ ಎಲೆ. ನಾನು ಸಾದಾ ಅಡಿಕೆ. ಹಾಕ್ಕೊಂಡು ಜಗಿದಾ ಅಂದ್ರೆ ಯಾರಿಗುಂಟು ಯಾರಿಗಿಲ್ಲ ಅಂತಾ ಶಕೀಲಾ ಭಾನು ಹಿಂದೆ ಬಿದ್ದೋರು ಈರೇಗೌಡ್ರು. ಹಿಂದೂಸ್ತಾನಿ ತಾಂಬೂಲ ಈ ತೋತಾಪುರಿ. ಜಾತಿ, ಮತ, ಪಂಥಗಳ ಸಮಾನತೆಯಲ್ಲಿ ಎಲ್ಲರನ್ನು ಬಡಿದೆಬ್ಬಿಸೋಕೆ ತೋತಾಪುರಿ ಚಿತ್ರ ಪ್ರಯತ್ನಿಸಿದೆ. ತೋತಾಪುರಿ ಸೀಕ್ವೆಲ್​​ಗೆ ಸುಮನ್​ ರಂಗನಾಥ್​​, ಡಾಲಿ ಧನಂಜಯ ಲವ್​​​​​ಸ್ಟೋರಿ ಗುಟ್ಟನ್ನು ಬಿಚ್ಚಡಲಾಗಿದೆ. ಅಂತೂ ಈರೇಗೌಡ್ರಿಗೆ ಶಕೀಲಾ ಸಿಗ್ತಾಳಾ ಅನ್ನೋದೆ ಸಸ್ಪೆನ್ಸ್​ ಮತ್ತು ಚಾಪ್ಟರ್-2ಗೆ ನಾಂದಿ.

ತೋತಾಪುರಿ ಆರ್ಟಿಸ್ಟ್ ಪರ್ಫಾಮೆನ್ಸ್

ನವರಸಗಳ ರಸಪಾಕ ಜಗ್ಗೇಶ್​​ ದುಡುಕೋದ್ರಲ್ಲಿ ಹಿಂದೆ. ಹುಡುಕೋದ್ರಲ್ಲಿ ಮುಂದೆ. ಬಿಚ್ಚು ಮಾತಿನ ಸ್ವಚ್ಛ ನಟನಾಗಿ ಜಗ್ಗೇಶ್​​ ಇಲ್ಲೂ ಡಬಲ್​ ಮೀನಿಂಗ್​ ಜೋಕುಗಳ ಸುರಿಮಳೆಗೈದಿದ್ದಾರೆ. ಮನೆ ಕೆಲಸದವಳಾಗಿ, ಈರೇಗೌಡ್ರಿಗೆ ಟೈಲರ್​ ಅಸಿಸ್ಟೆಂಟ್​​​ ಆಗಿ ನಂಜಮ್ಮನ ಮಾತುಗಳು ನಂಜಿನಂತಿವೆ. ಹಾಗಲಕಾಯಿಯಷ್ಟು ಕಹಿಯಾದ್ರೂ, ಆರೋಗ್ಯಕ್ಕೆ ಹಿತವಾಗೋ ಜೀವನ ಶೈಲಿ ಅವಳದ್ದು. ಹುಟ್ಟು ಅನಿಷ್ಟವಾದ್ರೂ, ಸಾವು ದರಿದ್ರವಾಗಬಾರದು ಅನ್ನೋ ರೀತಿ ಎಲ್ಲರೂ ಎಲ್ಲರನ್ನೂ ಸಮಾನವಾಗಿ ಕಾಣೋ ಪಾತ್ರಗಳು. ಅನಾಥಾಶ್ರಮವನ್ನೇ ದೇವಸ್ಥಾನದಂತೆ ಕಾಣೋ ಜಗ್ಗೇಶ್​​ಗೆ ಅನನ್ಯ ಜೀವನ ಪ್ರೀತಿ.

ದತ್ತಣ್ಣ, ಸುಮನ್​ ರಂಗನಾಥ್​​​ ಹೇಮಾ ದತ್​ ಚುಟುಕಾದ್ರೂ ಚಿವುಟುವ ಪಾತ್ರಗಳು. ಕಥೆಯಲ್ಲಿ ಜೋಡಿ ತುಟಿಗಳ ಪಿಸು ಮಾತುಗಳಿವೆ. ಜೀವನಸಾರದ ಲಾಟಿ ಏಟಿದೆ. ಎಲ್ಲವನ್ನು ನಾವೇ ಪ್ರಶ್ನೆ ಮಾಡಿಕೊಂಡ್ರೆ ಯಾವುದು ಸತ್ಯ..? ಯಾವುದು ಸುಳ್ಳು ಅನ್ನೋದು ಗೊತ್ತಾಗಲಿದೆ.

ತೋತಾಪುರಿ ಪ್ಲಸ್ ಪಾಯಿಂಟ್ಸ್

ತಂಟೆ ಮಾಡೋ ತುಂಟ ಮಾತುಗಳು

ಕಿಕ್ಕೇರಿಸೋ ಬಾಗ್ಲು ತೆಗಿ ಮೇರಿ ಜಾನ್​

ಜಾತಿ ಧರ್ಮಗಳ ವೈಚಾರಿಕತೆ

ಅನಿಷ್ಠ ಪದ್ಧತಿಗಳ ಅವಲೋಕನ

ಹೈ ವೋಲ್ಟೇಜ್​ ಜೋಕ್ಸ್​​​

ವಿಜಯ್​ ಪ್ರಸಾದ್​​ ಪೋಲಿ ಸಂಭಾಷಣೆ

ಜಗ್ಗೇಶ್​ ಕಿಲಾಡಿತನ, ಅದಿತಿ ಅನುರಾಗ

ತೋತಾಪುರಿ ಮೈನಸ್ ಪಾಯಿಂಟ್ಸ್

ಬೈದೇ ಬುದ್ದಿ ಹೇಳಬೇಕಾಗಿಲ್ಲ. ಹಾಗೇ ಅರೆಬರೆ ಬಟ್ಟೆ ತೊಟ್ಟ ಡೈಲಾಗ್​ಗಳ ಮೂಲಕವೇ ನೀತಿ ಹೇಳೋಕೆ ಹೊರಟ ವಿಜಯ್​ ಪ್ರಸಾದ್​​ ಕೊಂಚ ಹೊಸ್ತಿಲು ದಾಟಿದ್ದಾರೆ. ಕೆಲವೊಂದಕ್ಕೆ ನಾಟಿತನನ ಬಣ್ಣ ಹೆಚ್ಚಾಗಿ ಬಳಿಯಲಾಗಿದೆ. ಕೆಲವೊಂದು ಕಡೆ ಬೆರೆಸಿರುವ ಮಸಾಲೆಗೆ ಹೊಟ್ಟೆ ಕೆಡಬಹುದು. ಇನ್ನು ಕೆಲವು ಕಡೆ ಖಾರದ ಮಾತುಗಳು ನೆತ್ತಿಗೆ ಹತ್ತಬಹುದು. ಎನಿವೇ, ಭಾವನೆಗಳ ಚಿಲಿಪಿಲಿಯೊಳಗೆ ಒಂದೊಳ್ಳೆ ಸಾಮಾಜಿಕ ಸಂದೇಶವಿರುವ ಸಿನಿಮಾ ತೋತಾಪುರಿಯಾಗಿರೋದ್ರಿಂದ ರಾಜಿಯಾಗಬಹುದು. ಇಂತಹ ಕಥೆಯನ್ನು ಮೆಚ್ಚಿ ಬಂಡವಾಳ ಹೂಡಿದ ಕೆ.ಎ ಸುರೇಶ್​ ಅವ್ರ ಸಿನಿಮೋತ್ಸಾಹ ಗ್ರೇಟ್ ಅನಿಸಲಿದೆ.

ತೋತಾಪುರಿ ಪವರ್ ಟಿವಿ ರೇಟಿಂಗ್: 3.5/5

ತೋತಾಪುರಿ ಫೈನಲ್ ಸ್ಟೇಟ್​ಮೆಂಟ್

ನರ ಮಾನವನ ಹುಟ್ಟು ಮಣ್ಣಿನಲ್ಲೇ, ಸಾವು ಕೂಡ ಅದೇ ಮಣ್ಣಿನಲ್ಲೆ. ಅಷ್ಟೇ ಯಾಕೆ ಆತ ಪೂಜಿಸುವ ಮಂದಿರಗಳ ನಿರ್ಮಾಣ ಕೂಡ ಮಣ್ಣಿನಲ್ಲೇ ಅನ್ನೋ ಸತ್ಯ ನಮಗೆಲ್ಲಾ ಗೊತ್ತಿದೆ. ಅದ್ರೂ ಜಾತಿ, ಮತ, ಧರ್ಮ, ಆಚರಣೆಗಳ ಬಂಧನದಲ್ಲಿ ಸಿಕ್ಕು ಅಂಧರಾಗಿರುವ ಪ್ರೇಕ್ಷಕರನ್ನು ಕಣ್ಣು ತೆರೆಸೋ ಸಿನಿಮಾ ಇದು. ಅನ್​ ಸೀಸನ್​​ ತೋತಾಪುರಿಯನ್ನು ಒಳಗಣ್ಣಿನಿಂದ ನೋಡಬೇಕು. ಮೊದಲಾರ್ಧದ ಪ್ಯಾಡ್ ಸ್ಟೋರಿ, ದ್ವಿತಿಯಾರ್ಧದಲ್ಲಿ ಮುಸಲ್ಮಾನ್ ಮನೆಗೆ ಬರೋ ರಾಯರ ಬೃಂದಾವನದ ಸೀನ್​ಗಳು ಭಾವೈಕ್ಯತೆಯ ಸಂದೇಶವನ್ನ ಈ ಚಿತ್ರದ ತಂಡ ಸಾರಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES