Saturday, May 4, 2024

ನಮ್ಮ ಜಿಲ್ಲೆಯಲ್ಲಿ 40% ಕಮಿಷನ್ ವ್ಯವಹಾರವಿಲ್ಲ; ಗುತ್ತಿಗೆದಾರ ಸ್ಪಷ್ಟನೆ

ಉಡುಪಿ; ರಾಜ್ಯದಲ್ಲಿ 40% ಕಮಿಷನ್ ಆರೋಪ ರಾಜ್ಯದ ಬಿಜೆಪಿ ಸರಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸಿದೆ. ಎಷ್ಟೇ ಸ್ಪಷ್ಟನೆ ಕೊಟ್ಟರೂ ಬೆಂಗಳೂರಿನ ಗುತ್ತಿಗೆದಾರರೇ ಬಹಿರಂಗ ಆರೋಪ ಮಾಡಿರುವುದರಿಂದ ವಿಪಕ್ಷ ಕಾಂಗ್ರೆಸ್ ಇದನ್ನೇ ಅಸ್ತ್ರ ಮಾಡಿಕೊಂಡಿದೆ. ಈ ಬಗ್ಗೆ ಉಡುಪಿಯಲ್ಲಿ ಗುತ್ತಿಗೆದಾರರೇ ಸ್ಪಷ್ಟನೆ ಕೊಟ್ಟಿದ್ದು, ಆರೋಪಕ್ಕೂ ತಮಗೂ ಸಂಬಂಧ ಇಲ್ಲವೆಂದು ಹೇಳಿದ್ದಾರೆ.

ಕಳೆದ ಒಂದು ವರ್ಷದಿಂದಲೂ ಗುತ್ತಿಗೆದಾರರ ಕಮಿಷನ್ ಆರೋಪ ರಾಜ್ಯದಲ್ಲಿ ಭಾರೀ ಸದ್ದು ಮಾಡ್ತಿದೆ. ನಲ್ವತ್ತು ಪರ್ಸೆಂಟ್ ಕಮಿಷನ್ ಅನ್ನೋದು ಚುನಾವಣೆ ವರ್ಷದಲ್ಲಿ ರಾಜ್ಯದ ಬಿಜೆಪಿ ಸರಕಾರದ ಮಾನವನ್ನೇ ಕಳೆಯುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಸರಕಾರದ ಪರವಾಗಿ ಸಚಿವರು, ಶಾಸಕರು ಎಷ್ಟೇ ಸ್ಪಷ್ಟನೆ ಕೊಟ್ಟರೂ, ನೀವು ತನಿಖೆಗೆ ವಹಿಸಿದರೆ ಪುರಾವೆ ನೀಡಲು ಸಿದ್ಧ ಎನ್ನುವ ಗುತ್ತಿಗೆದಾರರ ಪ್ರತಿ ಸವಾಲು ಆಳುವ ವರ್ಗವನ್ನೇ ಧೃತಿಗೆಡಿಸಿದೆ.

ಇದೇ ವಿಚಾರ ಪ್ರತಿಪಕ್ಷ ಕಾಂಗ್ರೆಸಿಗೂ ದೊಡ್ಡ ಅಸ್ತ್ರ ಸಿಕ್ಕಂತಾಗಿದ್ದು, ಅದನ್ನೇ ಮುಂದಿಟ್ಟು ಸಿಎಂ ಬೊಮ್ಮಾಯಿ ವಿರುದ್ಧವೇ ತಿರುಗಿ ಬಿದ್ದಿದೆ. ಪೇ ಸಿಎಂ ಅಭಿಯಾನ ಅದೇ 40% ಕಮಿಷನ್ ಆರೋಪದಿಂದ ಹುಟ್ಕೊಂಡಿದ್ದು, ಈಗ ಇಡೀ ರಾಜ್ಯದಲ್ಲೆಡೆ ಆವರಿಸಿಕೊಂಡಿದೆ.

ಈ ನಡುವೆ ಉಡುಪಿಯಲ್ಲಿ ಪ್ರಭಾವಿ ಗುತ್ತಿಗೆದಾರರಾಗಿರುವ ಮುನಿಯಾಲು ಉದಯ ಕುಮಾರ್ ಶೆಟ್ಟಿ ಕಮಿಷನ್ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 40% ಕಮಿಷನ್ ಆರೋಪಕ್ಕೂ ನಮಗೂ ಸಂಬಂಧ ಇಲ್ಲ. ಜಿಲ್ಲೆಯಲ್ಲಿ ಅಂತಹ ಯಾವುದೇ ಪರಿಪಾಠ ಇಲ್ಲ, 25 ವರ್ಷಗಳಿಂದ ನಾವು ಗುತ್ತಿಗೆ ವಹಿಸ್ಕೊಂಡು ಕೆಲಸ ಮಾಡುತ್ತಾ ಇದ್ದೇವೆ. ಆರೋಪದ ಕಾರಣದಿಂದ ಹಣ ಬಿಡುಗಡೆ ಆಗದಿರುವುದು, ಕಾಮಗಾರಿ ವಹಿಸದೇ ಜಿಲ್ಲೆಯಲ್ಲಿ ಅಭಿವೃದ್ಧಿ ಆಗದೇ ಉಳಿದರೆ ಅದರಿಂದ ಎಲ್ಲರಿಗೂ ನಷ್ಟ. ಅಂಥ ಸ್ಥಿತಿ ಬರಬಾರದೆಂದು ನಾವು ಸ್ಪಷ್ಟನೆ ಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ರಸ್ತೆ ಸರಿಯಿಲ್ಲವೆಂದು ಸಾಮಾಜಿಕ ಕಾರ್ಯಕರ್ತರು ರಸ್ತೆಯಲ್ಲಿ ಹೊರಳಾಡಿ ಪ್ರತಿಭಟನೆ ನಡೆಸಿದ್ದರು. ಮಣಿಪಾಲದ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಇರುವ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು ನಮಗೆಲ್ಲ ನಾಚಿಕೆ. ಆದರೆ, ಆರೋಪದ ಕಾರಣಕ್ಕೆ ರಸ್ತೆ ಸರಿಪಡಿಸದೇ ಇರುವುದು, ಹಣ ಬಿಡುಗಡೆ ಮಾಡದೇ ಇರುವುದು ಸರಿಯಲ್ಲ. ಜಿಲ್ಲೆಯಲ್ಲಿ 400ರಷ್ಟು ಸಣ್ಣ ಪುಟ್ಟ ಗುತ್ತಿಗೆದಾರರು ಇದ್ದಾರೆ. ಹಣ ಕೊಡದೇ ಸತಾಯಿಸಿದರೆ, ದುಡಿಯುವ ವರ್ಗ, ಅವರ ಕುಟುಂಬ ವರ್ಗಕ್ಕೂ ಕಷ್ಟ ಎದುರಾಗುತ್ತಿದೆ ಎಂದು ದೂರಿದ್ದರು.

ಬೆಂಗಳೂರಿನಲ್ಲಿ ಕೆಲವು ದೊಡ್ಡ ಗುತ್ತಿಗೆಯವರು ಇಂಥ ಆರೋಪ ಮಾಡಿರಬಹುದು. ಜಿಲ್ಲೆಯ ಮಟ್ಟದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಇಂಥ ಬೆಳವಣಿಗೆ ಆಗಕೂಡದು. 40% ಪರ್ಸೆಂಟ್ ಬಗ್ಗೆ ಜನರು ಪ್ರಶ್ನಿಸುತ್ತಿದ್ದಾರೆ, ನಮ್ಮನ್ನೂ ಸಂಶಯದ ದೃಷ್ಟಿಯಿಂದ ನೋಡುವ ಸ್ಥಿತಿ ಎದುರಾಗಿದೆ. ಜನರ ದುಡ್ಡು ಸೂಕ್ತವಾಗಿ ಬಳಕೆಯಾಗಬೇಕು ಅನ್ನುವ ಕಾಳಜಿಯಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದಿದ್ದಾರೆ.

ಗುತ್ತಿಗೆದಾರರ ಸಂಘ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿಲ್ಲ. ಕೋರ್ಟ್ ಜಟಾಪಟಿಯಿಂದ ಸದ್ಯಕ್ಕೆ ಬರ್ಖಾಸ್ತು ಆಗಿದೆ. ಮುನಿಯಾಲು ಉದಯ ಕುಮಾರ್ ಶೆಟ್ಟಿ ಜಿಲ್ಲೆಯ ಮಟ್ಟಿಗೆ ಪ್ರಭಾವಿ ಗುತ್ತಿಗೆದಾರರು. ಅಲ್ಲದೆ, ಕಾಂಗ್ರೆಸಿನಲ್ಲಿ ಗುರುತಿಸಿಕೊಂಡಿದ್ದು ಕಳೆದ ಬಾರಿ ಕಾರ್ಕಳ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು. ಸದ್ಯದ ಮಟ್ಟಿಗೆ ಬಿಜೆಪಿ ಅಧಿಕಾರದಲ್ಲಿರುವುದರಿಂದ ಬಿಜೆಪಿ ವಿರುದ್ಧ ಮಾತನಾಡುತ್ತಿಲ್ಲ.

ಇಂಧನ ಸಚಿವ ಸುನಿಲ್ ಕುಮಾರ್ ಸೇರಿದಂತೆ ಉಡುಪಿಯಲ್ಲಿ ಬಿಜೆಪಿ ಮುಖಂಡರ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಉದಯ ಕುಮಾರ್ ಶೆಟ್ಟಿ ಮತ್ತು ಅವರ ಆಪ್ತರು ಸೇರಿಕೊಂಡು ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಉದಯ ಕುಮಾರ್ ಶೆಟ್ಟಿ ಬಿಜೆಪಿ ಸೇರಲಿದ್ದಾರೆಯೇ ಎನ್ನುವ ಅನುಮಾನವೂ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ.

RELATED ARTICLES

Related Articles

TRENDING ARTICLES