ಕೊಪ್ಪಳ; ಮಲೆನಾಡು ಶಿವಮೊಗ್ಗದಲ್ಲಿ ಕಳೆದ ವಾರವಷ್ಟೇ ಶಂಕಿತ ಮೂವರು ಐಎಸ್ಐಎಸ್ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಶಂಕಿತ ಉಗ್ರರು ಕರಿನೆರಳು ಇದೀಗ ಕೊಪ್ಪಳ ಜಿಲ್ಲೆಯ ಮೇಲೂ ಬಿದ್ದಿದೆ.
ಭತ್ತದ ನಾಡು ಎಂದು ಕರೆಯಿಸಿಕೊಳ್ಳುವ ಗಂಗಾವತಿ ನಗರದಲ್ಲಿ ಶಿವಮೊಗ್ಗದ ಶಂಕಿತ ಉಗ್ರರ ಜೊತೆಗೆ ಸಂಪರ್ಕ ಹೊಂದಿರುವ ಕಾರಣಕ್ಕೆ ಬಾಳೆ ಹಣ್ಣು ವ್ಯಾಪಾರಿ ಶಬ್ಬೀರ್ ಎನ್ನುವ ವ್ಯಕ್ತಿಯನ್ನು ನಿನ್ನೆ ರಾತ್ರಿ ಶಿವಮೊಗ್ಗದ ಪೊಲೀಸರು ಗಂಗಾವತಿಗೆ ಬಂದು ತಮ್ಮ ವಶಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗದಲ್ಲಿ ಐಎಸ್ಐಎಸ್ ಸಂಘಟನೆಯ ಶಂಕಿತ ಉಗ್ರರೆಂದು ಶರೀಖ್, ಮಾಜ್ ಹಾಗೂ ಸಯ್ಯದ್ ಯಾಸೀನ್ ನನ್ನು ಬಂಧಿಸಲಾಗಿದೆ. ಇವರ ಜೊತೆಗೆ ಗಂಗಾವತಿ ನಗರದಲ್ಲಿ ಬಾಳೆ ಹಣ್ಣಿನ ಹೊಲಸೇಲ್ ವ್ಯಾಪಾರಿ ಬಿಕಾಂ ಪದವಿಧರನಾಗಿರುವ ಶಬ್ಬೀರ್ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ಕಾರಣಕ್ಕಾಗಿ ವಿಚಾರಣೆಗೆ ಶಿವಮೊಗ್ಗದ ಪೊಲೀಸರು ಶಬ್ಬೀರ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಬ್ಬೀರ್ ಬಂಧನದ ಕುರಿತು ಎಸ್ಪಿ ಅರುಣಾಂಗ್ಷು ಗಿರಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಕೆಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಪಿಎಫ್ಐ ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಫಯಾಜ್ ನ ಬಂಧನವಾಗಿತ್ತು. ಈಗ ಅದರ ಬೆನ್ನಲ್ಲೇ ಶಂಕಿತ ಉಗ್ರರ ಜೊತೆಗೆ ಸಂಪರ್ಕದ ಹಿನ್ನಲೆಯಲ್ಲಿ ಮತ್ತೊಬ್ಬನನ್ನು ಬಂಧಿಸಲಾಗಿದೆ.