ಮೈಸೂರು : ವಿಶ್ವವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕ್ರತಿಕ ನಗರಿ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಝಗಮಗಿಸುವ ವಿದ್ಯುತ್ ಬೆಳಕಿನಲ್ಲಿ ಪಾರಂಪರಿಕ ನಗರಿ ಮೈಸೂರು ಕಂಗೊಳಿಸುತ್ತಿದೆ. ಮೈಸೂರಿನ ಚಾಮುಂಡಿಬೆಟ್ಟದ ಸನ್ನಿಧಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಬೆಳಗ್ಗೆ 9ಗಂಟೆ 45 ನಿಮಿಷದಿಂದ 10 ಗಂಟೆ 5 ನಿಮಿಷದೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶರನ್ನವರಾತ್ರಿಯ 9 ದಿನಗಳ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಇದಕ್ಕೂ ಮೊದಲು ರಾಷ್ಟಪತಿ ಶಕ್ತಿ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದು ಅಗ್ರಪೂಜೆ ಸಲ್ಲಿಸುವರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ದಸರಾ ಆರಂಭದ ಮೊದಲ ದಿನವಾದ ಸೋಮವಾರ ಚಾಮುಂಡೇಶ್ವರಿ ದೇವಿಗೆ ಬ್ರಾಹ್ಮಿ ಅಲಂಕಾರ ಮಾಡಿ ವಜ್ರಾಭರಣಗಳಿಂದ ಸಿಂಗರಿಸಲಾಗುತ್ತದೆ.
ಮೈಸೂರು ದಸರಾ ಮಹೋತ್ಸವದ ದಸರಾ ಉದ್ಘಾಟನೆಗೆ ರಾಷ್ಟಪತಿಗಳು ಆಗಮಿಸುವ ಹಿನ್ನಲೆ ಇಂದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ನಾಡಿನ ಜನ್ರಿಗೆ ದಸರಾ ಹಬ್ಬದ ಶುಭಾಶಯ ಕೊರಿದ್ದಾರೆ. ಇನ್ನೂ ಮೈಸೂರು ದಸರಾ ಮಹೋತ್ಸವದ ನಿಮಿತ್ತ ಮೈಸೂರಿನಲ್ಲಿ ನಾಳೆಯಿಂದ ಹಲವು ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ. ರೈತ ದಸರಾ, ದಸರಾ ಚಲನ ಚಿತ್ರೋತ್ಸವ, ದಸರಾ ಮ್ಯಾರಥಾನ್, ಯುವ ದಸರಾ, ದಸರಾ ಕ್ರೀಡಾಕೂಡ, ದಸರಾ ಕುಸ್ತಿ, ದಸರಾ ಆಹಾರ ಮೇಳ ಉದ್ಘಾಟನೆಗೊಳ್ಳಲಿದೆ.
ಇನ್ನೂ ಮೈಸೂರು ಅರಮನೆಯಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಹಲವು ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯಲಿವೆ. ನಾಳೆ ರಾಜವಂಶಸ್ಥ ಯದುವೀರ್ ಖಾಸಗಿ ದರ್ಬಾರ್ ಹಾಲ್ ನಲ್ಲಿ ಬೆಳಿಗ್ಗೆ 11 ಗಂಟೆಗೆ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಕೊರೊನಾ ಕಾರಣ ಕಳೆದ ಎರಡು ವರ್ಷಗಳಿಂದ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆದು ಕಳೆಗುಂದಿದ್ದ ಮೈಸೂರು ದಸರಾ ಮಹೋತ್ಸವ ಈ ಬಾರಿ ಅದ್ದೂರಿಯಿಂದ ನಡೆಯುತ್ತಿದೆ. ಒಟ್ಟಾರೆ ಅರಮನೆ ನಗರಿ ಮೈಸೂರಿನಲ್ಲಿ ನಾಡಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ.
ಸುರೇಶ್ ಬಿ.ಪವರ್ ಟಿವಿ ಮೈಸೂರು