ನವದೆಹಲಿ : ತಮ್ಮ ಆಡಳಿತ ಮಾದರಿ ವಿಚಾರವಾಗಿ ವಿರೋಧ ಪಕ್ಷಗಳು ಹೊಂದಿರಬಹುದಾದ ತಪ್ಪು ತಿಳಿವಳಿಕೆಗಳ ಕುರಿತು ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಜತೆ ಸಮಾಲೋಚನೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಉಪ ರಾಷ್ಟ್ರಪತಿ M.ವೆಂಕಯ್ಯ ನಾಯ್ಡು ಸಲಹೆ ನೀಡಿದ್ದಾರೆ.
ಕೇಂದ್ರ ಸರ್ಕಾರವು ಜಾರಿಗೆ ತಂದ ಹಲವು ಯೋಜನೆಗಳಲ್ಲಿ ಬ್ಯಾಂಕ್ ಖಾತೆಗೆ ನೇರ ಸಹಾಯಧನ ಹಾಗೂ ಇತರ ನೆರವು ಸಂದಾಯ ಯೋಜನೆಯು ಬಹಳ ಉತ್ತಮವಾದದ್ದು. ಇದರಿಂದ ದೇಶಾದ್ಯಂತ ಮಧ್ಯವರ್ತಿಗಳ ಹಾವಳಿ ಬುಡಮೇಲಾಯಿತು ಎಂದು ನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಯ್ದ 86 ಭಾಷಣಗಳ ಸಂಕಲನ ಪುಸ್ತಕ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಅನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಸಾಧನೆಗಳ ನಡುವೆಯೂ ಮೋದಿ ಅವರ ಮಾದರಿಯ ಬಗ್ಗೆ ಕೆಲವು ವರ್ಗಗಳು ಈಗಲೂ ಕೆಲವು ವಿರೋಧಗಳನ್ನು ಹೊಂದಿವೆ. ಇವು ತಪ್ಪು ತಿಳಿವಳಿಕೆಗಳ ಮೂಲಕ ಇರಬಹುದು ಅಥವಾ ರಾಜಕೀಯ ಉದ್ದೇಶದಿಂದ ಇರಬಹುದು ಎಂದು ನಾಯ್ಡು ಹೇಳಿದ್ದಾರೆ. ಕಾಲಕ್ರಮೇಣ ಈ ತಪ್ಪು ತಿಳಿವಳಿಕೆಗಳು ಕೂಡ ನಿವಾರಣೆ ಆಗುತ್ತವೆ ಎಂದು ಸಲಹೆ ಹೇಳಿದ್ದಾರೆ.