ಬೆಂಗಳೂರು: ಬೆಂಗಳೂರಿನಲ್ಲಿ ಬಾಗಲೂರು, ಪಾದರಾಯನಪುರ, ರಿಚ್ಮಂಡ್ ಟೌನ್, ಟ್ಯಾನರಿ ಸೇರಿದಂತೆ ರಾಜ್ಯದ ಹಲವು ಕಡೆ ಎನ್ಐಎ ತಂಡ ಎಸ್ಡಿಪಿಐ ಮೇಲೆ ದಾಳಿ ನಡೆಸಿದೆ.
ಇಂದು ಬೆಳಿಗ್ಗೆ 3 ಗಂಟೆ ಸುಮಾರಿಗೆ ಎಸ್ಡಿಪಿಐ ಹಾಗೂ ಪಿಎಫ್ಐ ನಾಯಕರ ಮನೆ ಮೇಲೆ ರೇಡ್ ಮಾಡಲಾಗಿದ್ದು, ನಾಲ್ವರ ಬಳಿ ಇದ್ದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.
ಪಿಎಫ್ಐ ಹಾಗೂ ಎಸ್ಡಿಪಿಐ ಕಚೇರಿಗೆ ಸುಮಾರು 60 ಕೋಟಿ ಮೌಲ್ಯದ ಹಣಕಾಸು ವ್ಯವಹಾರ ನಡೆದಿದೆ ಎಂದು ಇಡಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಇಂದು ರಾಜ್ಯ ಸೇರಿದಂತೆ ದೇಶದ 10 ರಾಜ್ಯಗಳಲ್ಲಿ ಎನ್ಐಎ ದಾಳಿ ನಡೆಸಿ 100 ಕ್ಕೂ ಅಧಿಕ ಎಸ್ಡಿಪಿಐ ಮುಖಂಡರನ್ನ ಬಂಧಿಸಿದೆ.
ಪಿಎಫ್ಐ ಸಂಘಟನೆಗೆ ವಿದೇಶದಿಂದ ಕೋಟಿ ಕೋಟಿ ಹಣ ಹರಿದು ಬಂದಿದೆ ಎಂದು ಮೊದಲಿನಂದ ಆರೋಪವಿತ್ತು. ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡುನಲ್ಲಿ ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವ ಆರೋಪದ ಮೇಲೆ ಈ ದಾಳಿ ನಡೆದಿದೆ.