Monday, September 23, 2024

ಹಸಿದವರ ಅನ್ನದಾಸೋಹ ಅಪ್ಪಾಜಿ ಕ್ಯಾಂಟೀನ್

ಮೈಸೂರು : ಸಾಲು ಸಾಲಾಗಿ ಊಟಕ್ಕೆ ಕ್ಯೂ ನಿಂತ ಜನ್ರು. ಮತ್ತೊಂದು ಕಡೆ ಹಸಿವು ನೀಗಿಸಿಕೊಳ್ತಿರುವ ವಿದ್ಯಾರ್ಥಿಗಳು, ಮಹಿಳೆಯರು. ಎಸ್ ಅಂದ ಹಾಗೆ ಇದು ಹೆಚ್.ಡಿ‌.ಕೋಟೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಎರಡು ತಿಂಗಳ ಹಿಂದಷ್ಟೇ ಆರಂಭ ಮಾಡಲಾಗಿರುವ ಕ್ಯಾಂಟೀನ್. ಹಸಿದವರ ಆಶ್ರಯ ತಾಣ ಅನ್ನೋ ಹೆಸ್ರಲ್ಲಿ ಆರಂಭವಾಗಿರುವ ಈ ಕ್ಯಾಂಟೀನ್ ನಿರ್ಮಾತೃ ಕೃಷ್ಣ ನಾಯಕ್, ಜೆಡಿಎಸ್ ಮುಖಂಡ. ಪವರ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಕ್ಯಾಂಟೀನ್‌ನಿಂದ ಆಗ್ತಿರುವ ಅನುಕೂಲತೆಗಳ ಬಗ್ಗೆ ಜನ್ರು ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ. ಕೇವಲ ಹತ್ತು ರೂಪಾಯಿಗೆ ಅಪ್ಪಾಜಿ ಕ್ಯಾಂಟೀನ್‌ನಿಂದ ಸಿಗ್ತಿರುವ ಊಟ, ತಿಂಡಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇನ್ನೂ ತಾಲೂಕು ಕೇಂದ್ರದಲ್ಲಿ ಎರಡು ತಿಂಗಳ ಹಿಂದಷ್ಟೇ ಆರಂಭವಾಗಿರುವ ಈ ಕ್ಯಾಂಟೀನ್ ಅಪಾರ ಜನಮನ್ನಣೆಗೆ ಪಾತ್ರವಾಗಿದೆ. ಕಾಲೇಜು ವಿದ್ಯಾರ್ಥಿಗಳು, ಹಳ್ಳಿಗಳಿಂದ ತಾಲೂಕು ಕೇಂದ್ರಕ್ಕೆ ವಿವಿಧ ಕೆಲಸಗಳಿಗೆ ಬರುವ ರೈತರು, ಆಟೋ, ಟ್ಯಾಕ್ಸಿ ಚಾಲಕರ ಹಸಿವನ್ನು ಕಡಿಮೆ ಹಣದಲ್ಲಿ ನೀಗಿಸುತ್ತಿದೆ ಈ ಕ್ಯಾಂಟಿನ್. ಪ್ರತಿನಿತ್ಯ ಅಪ್ಪಾಜಿ ಕ್ಯಾಂಟೀನ್ ಸುಮಾರು 1600 ಮಂದಿಗೆ ಊಟ, ತಿಂಡಿ ಒದಗಿಸ್ತಿದೆ. ಬೆಳಗ್ಗೆ 8 ಗಂಟೆಯಿಂದ 10:30ರ ವರೆಗೆ ಇಡ್ಲಿ, ಖಾರಾಬಾತ್, ಬಾತ್ ಉಪಹಾರ ಕೇವಲ 10 ರೂಪಾಯಿಗೆ ದೊರೆಯುತ್ತಿದೆ. ಇನ್ನು 12:30 ರಿಂದ 3 ಗಂಟೆವರೆಗೆ ಮುದ್ದೆ, ಅನ್ನ ಸಾರು, ಪಲ್ಯ, ಉಪ್ಪಿನ ಕಾಯಿ, ಅಪ್ಪಳ ಕೂಡ ಕೇವಲ 10 ರೂಪಾಯಿಗೆ ಸಿಗುತ್ತಿದೆ. ಕ್ಯಾಂಟೀನ್‌ನಲ್ಲಿ ಮೂವರು ಮಹಿಳೆಯರು ಸೇರಿ 11 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶುಚಿತ್ವದ ಜೊತೆಗೆ ರುಚಿ ರುಚಿಯಾದ ಊಟದ ಮೂಲಕ ಬಡವರು, ಹಸಿದವ್ರ ಹೊಟ್ಟೆ ತುಂಬಿಸುತ್ತಿದೆ. ಇನ್ನೂ ಈ ಕ್ಯಾಂಟೀನ್ ರಾಜಕೀಯ ಲಾಭಕ್ಕಾಗಿ ಆರಂಭ ಮಾಡಿದ್ದಾರೆ ಅನ್ನೋರಿಗೆ ಕೃಷ್ಣ ನಾಯಕ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.

ಒಟ್ಟಿನಲ್ಲಿ, ರಾಜಕೀಯ ಲಾಭಕ್ಕೆ ಕೆಲ ರಾಜಕಾರಣಿಗಳು ಸೇವಾ ಮನೋಭಾವದ ಮುಖವಾಡ ಹಾಕಿಕೊಂಡು ಸೇವೆ ಮಾಡ್ತೀವಿ ಅನ್ನೋರೇ ಹೆಚ್ಚು. ಆದ್ರೆ, ನಿಜವಾದ ಜನ್ರ ಸೇವೆ ಮಾಡೋರಿಗೆ ಯಾವುದೇ ಅಪೇಕ್ಷೆ ಇರೋದಿಲ್ಲ. ಹೆಚ್.ಡಿ.ಕೋಟೆ ಅಪ್ಪಾಜಿ ಕ್ಯಾಂಟೀನ್ ಹಸಿದವರ ಆಶ್ರಯ ತಾಣ ಅನ್ನೋದು ನಿಜಕ್ಕೂ ಸಾಬೀತು ಆಗಿದೆ. ಆ ಮೂಲಕ ಸರ್ಕಾರವೇ ಮಾಡಲಾಗದ ಕೆಲ್ಸವನ್ನು ಜನಸಾಮನ್ಯನೊಬ್ಬ ಮಾಡ್ತಿರೋದು ನಿಜಕ್ಕೂ ಶ್ಲಾಘನೀಯ.

 ಸುರೇಶ್ ಬಿ.ಪವರ್ ಟಿವಿ ಮೈಸೂರು.

RELATED ARTICLES

Related Articles

TRENDING ARTICLES