ರಾಮನಗರ : ಬಸ್ ನಿಲ್ದಾಣದಲ್ಲಿ ಕಳ್ಳರು, ಕುಡುಕರ ಹಾವಳಿ ಮಿತಿಮೀರಿದೆ. ಕುಡುಕರು ಪ್ಲಾಟ್ ಫಾರಂಗಳಲ್ಲೇ ಮಲಗುತ್ತಿದ್ದು, ಪ್ರಯಾಣಿಕರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.ಇದರ ಮುಂದುವರಿದ ಭಾಗವಾಗಿ ಮಹಿಳಾ ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸಿದ ಕುಡುಕನೋರ್ವನಿಗೆ ಮಹಿಳೆಯೊಬ್ಬರು ಹಿಗ್ಗಾಮುಗ್ಗ ಥಳಿಸಿ ಪೊರಕೆ ಸೇವೆ ಮಾಡಿದಳು.ಈ ಬಸ್ ನಿಲ್ದಾಣ ನಿರ್ಮಾಣವಾಗಿ 10 ವರ್ಷಗಳೇ ಕಳೆದಿದೆ. ಆದರೆ, ಈ ನಿಲ್ದಾಣದಲ್ಲಿ ಸೌಲಭ್ಯಗಳು ಮಾತ್ರ ಇನ್ನೂ ಮರೀಚಿಕೆಯಾಗೇ ಉಳಿದಿದೆ. ಈ ನಿಲ್ದಾಣದ ಪ್ಲಾಟ್ ಫಾರಂಗಳಲ್ಲಿ ಕುಡುಕರು, ಭಿಕ್ಷುಕರ ಹಾವಳಿ ಹೆಚ್ಚಾಗಿದ್ದು, ಕುಡಿದು ಬಂದು ಪ್ರಯಾಣಿಕರಿಗಾಗಿ ಮಾಡಿರುವ ಆಸನಗಳಲ್ಲಿ ಮಲಗುತ್ತಿದ್ದಾರೆ. ಹೀಗೆ ಪ್ರತಿನಿತ್ಯ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.
ಅಂದ ಹಾಗೆ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು, ಕಾಲೇಜು ವಿಧ್ಯಾರ್ಥಿಗಳು, ಬೆಂಗಳೂರಿಗೆ ಕೆಲಸಕ್ಕೆ ತೆರಳಲು ಹಾಗೂ ತಮ್ಮ ತಮ್ಮ ಊರುಗಳಿಗೆ ತೆರಳಲು ಈ ನಿಲ್ದಾಣಕ್ಕೆ ಬರ್ತಾರೆ, ಆದ್ರೆ ಬರುವಂತಹ ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಕುಡಿಯಲು ಎಲ್ಲೂ ಸಹ ನೀರು ಕೂಡ ಸಿಗೋದಿಲ್ಲ, ನಿಲ್ದಾಣದಲ್ಲಿ ಸಿಟಿಟಿವಿ ಇಲ್ಲದ ಕಾರಣ, ಸಾಕಷ್ಟು ಮೊಬೈಲ್ ಕಳ್ಳತನ, ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇನ್ನೂ ಕಾಲೇಜು ವಿದ್ಯಾರ್ಥಿನಿಯರು ಬಸ್ ಹತ್ತಲು ಬರುವ ವೇಳೆ ಪುಂಡ ಪೋಕರಿಗಳು ಚುಡಾಯಿಸುತ್ತಿದ್ದು, ಸೂಕ್ತ ರಕ್ಷಣೆ ಇಲ್ಲದ ಕಾರಣ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಆತಂಕದಲ್ಲೇ ಬಸ್ ಹತ್ತುವ ಪರಿಸ್ಥಿತಿ ಉಂಟಾಗಿದೆ.
ಒಟ್ಟಾರೆ ಬೆಂಗಳೂರಿಗೆ ಹೊಂದಿಕೊಂಡಂತಿರುವ ರಾಮನಗರ ಬಸ್ ನಿಲ್ದಾಣದಲ್ಲೇ ಇಷ್ಟೆಲ್ಲಾ ಸಮಸ್ಯೆಗಳಿದ್ರೂ ಅಧಿಕಾರಿಗಳು ಮಾತ್ರ ಜಾಣಮೌನ ವಹಿಸಿರುವುದು ಮಾತ್ರ ವಿಪರ್ಯಾಸ.
ಪ್ರವೀಣ್ ಎಂ.ಹೆಚ್.ಪವರ್ ಟಿವಿ ರಾಮನಗರ