ಬೆಂಗಳೂರು : ಬಡವರು ಮತ್ತು ಮಧ್ಯಮ ವರ್ಗದವರ ಮನೆಗಳನ್ನ ಏಕಾಏಕಿ ನೆಲಸಮ ಮಾಡುವ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೊಡ್ಡವರ ಒತ್ತುವರಿ ಕಾಣ್ತಿಲ್ಲ. ಕಂಡರೂ ಬಡವರನ್ನೇ ಟಾರ್ಗೆಟ್ ಮಾಡಿ ಶೆಡ್‌ಗಳನ್ನ ನೆಲಸಮ ಮಾಡ್ತಿದ್ದಾರೆ. ವಿಪ್ರೋ ತೆರವಿಗೆ ಮೀನಾಮೇಷ ಎಣಿಸುತ್ತಿರುವುದರ ಹಿಂದೆ ಪ್ರಭಾವಿಗಳ ಕೈವಾಡ ಹಾಗೂ ಒತ್ತಡ ಇದೆಯೆಂಬ ಆರೋಪ ಜೋರಾಗಿ ಕೇಳಿ ಬರ್ತಿದೆ. ನಿನ್ನೆ ಒಂದೇ ದಿನ ಒಂದು ತಾಸು ಸೌಂಡ್ ಮಾಡಿ ಜೆಸಿಬಿ ಸುಮ್ಮನಾಗಿತ್ತು. ಪಾಲಿಕೆ ಅಧಿಕಾರಿಗಳು ಸಹ ಸ್ಥಳದಿಂದ ಪರಾರಿಯಾಗಿದ್ದರು. ಗ್ರಿಲ್ ಕಟರ್ ತಂದಿಲ್ಲ ಅಂತ ಕುಂಟು ನೆಪ ಹೇಳಿ ಜೂಟ್ ಹೇಳಿಬಿಟ್ರು.
ಇವತ್ತು ಸ್ವತಃ ವಿಪ್ರೋ ಕಂಪನಿಯೇ ಫೆನ್ಸಿಂಗ್ ತೆರವು ಕಾರ್ಯಕ್ಕೆ ಮುಂದಾಗಿತ್ತು. ಕೆಟ್ಟ ಮೇಲೆ ಬುದ್ದಿ ಬಂತು ಅನ್ನೊ ಹಾಗೆ ತಾವು ಒತ್ತುವರಿ ಮಾಡಿಕೊಂಡು ಕಬ್ಬಿಣದ ಕಾಂಪೌಂಡ್ ಹಾಕಿಕೊಂಡಿದ್ದ ತಡೆಗೋಡೆಯನ್ನ ಸ್ವತಃ ಸರ್ಜಾಪುರದ ವಿಪ್ರೋ ಕಂಪನಿಯೇ ತೆರವುಗೊಳಿಸ್ತು. ಆದ್ರೆ, ಸ್ಥಳಕ್ಕೆ ಆಗಮಿಸದ ಪಾಲಿಕೆ ಸೋಮಾರಿ ಅಧಿಕಾರಿಗಳು ಮಧ್ಯಾಹ್ನದೊತ್ತಿಗೆ ಆಗಮಿಸಿ ಪೌರುಷ ತೋರಿಸಿದ್ರು. ವಿಪ್ರೋ ತೆರವು ಮಾಡಿದ ಬಳಿಕ ಬಾಕಿ ಉಳಿದ ಕಲ್ಲಿನ ತಡೆಗೋಡೆಯನ್ನ ಉರುಳಿಸೋಕೆ ಮುಂದಾಗಿತ್ತು. ಆದ್ರೂ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಳ್ಳವರ ಪರ ಬ್ಯಾಟಿಂಗ್ ಬೀಸುತ್ತಿದ್ದಾರೆ ಅಂತ ಸ್ಥಳೀಯರು ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಗಂಟೆಯ ಸುಮಾರಿಗೆ ವಿಪ್ರೋ ತಡೆಗೋಡೆ ತೆರವನ್ನ ಆರಂಭಿಸಲಾಯ್ತು. ಶೇ.20 ರಷ್ಟು ತೆರವಾಗ್ತಿದ್ದ ಹಾಗೇ ಪಾಲಿಕೆ ಬುಲ್ಡೋಜರ್ ಗಳಿಗೂ ಭಯ ಎದುರಾಗಿತ್ತು ಅನ್ಸುತ್ತೆ. ದೊಡ್ಡವರ ಬಿಲ್ಡಿಂಗ್ ಕಾಂಪೌಂಡ್ ಒತ್ತುವರಿ ತೆರವು ಕಾರ್ಯಚರಣೆ ಮಾಡುವ ವೇಳೆ ಜೆಸಿಬಿಯ ವೈಯರ್ ಕಟ್ ಆದ ಕಾರಣ ಅರ್ಧಕ್ಕೆ ಸ್ಥಗಿತಗೊಳಿಸಲಾಯ್ತು. ಸರಿಪಡಿಸೋಕೆ ಮೂರು ತಾಸಿಗೂ ಅಧಿಕ ಸಮಯ ಬೇಕಾಗುತ್ತೆ ಅಂತ ಹೇಳಿದ್ರು. ನಾಳೆಗೆ ವಿಪ್ರೋ ತಡೆಗೋಡೆ ಸೇರಿದಂತೆ ಕಸವನಹಳ್ಳಿ ಸಮೀಪದ ಶೆಡ್, ಸರ್ಜಾಪುರದ ಗ್ರೀನ್ ವುಡ್ ರೆಸಿಡೆನ್ಸಿಯ ರಾಜಕಾಲುವೆ ಸ್ವ್ಯಾಬ್ ತೆರವು ನಡೆಸಲಾಗುತ್ತೆ. ಒತ್ತವರಿಯನ್ನ ಸಂಪೂರ್ಣವಾಗಿ ತೆರವುಗೊಳಿಸಲಾಗುತ್ತೆ ಅಂತ ಅಧಿಕಾರಿಗಳು ನೀಡಿದ್ದಾರೆ.
ಒಟ್ನಲ್ಲಿ ವಿಪ್ರೋ ಒತ್ತುವರಿ ತೆರವಿಗೆ ಪಾಲಿಕೆಗೆ ಮನಸ್ಸಿಲ್ಲ. ಕಾಟಾಚಾರದ ತೆರವನ್ನು ಮಾಡ್ತಿರೊ ಬಿಬಿಎಂಪಿ ವಿರುದ್ಧ ಜನಾಕ್ರೋಶ ವ್ಯಕ್ತವಾಗ್ತಿದೆ. ಮಹದೇವಪುರ ವಲಯದಲ್ಲಿ ಇಂದು ಸ್ಥಗಿತವಾಗಿದ್ದ ಒತ್ತುವರಿ ತೆರವಿನ ನಾಟಕ ನಾಳೆಯೂ ಮುಂದುವರಿಯಲಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು.