ಹಾವೇರಿ : ಬೆಳೆವಿಮೆ ತುಂಬಿದ್ದ ರೈತರಿಗೆ, ಬೆಳೆ ಹಾನಿಯಾದಾಗ ಪರಿಹಾರದ ಹಣ ಬಂದಿರಲಿಲ್ಲ. 2018-19ರ ಬೆಳೆವಿಮೆ ನೀಡುವಂತೆ ನಿರಂತರವಾಗಿ ಜಿಲ್ಲೆಯ ರೈತರು ಹೋರಾಟ ಮಾಡುತ್ತಲೇ ಬಂದಿದ್ದರು. ಹೋರಾಟದ ಫಲವಾಗಿ ತಡವಾಗಿ ಆದ್ರೂ ಈಗ ನಾಲ್ಕು ವರ್ಷಗಳ ಬಳಿಕ ರೈತರ ಖಾತೆಗಳಿಗೆ ವಿಮೆಯ ಪರಿಹಾರದ ಹಣ ಸಂದಾಯವಾಗುತ್ತಿದೆ.ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 9,204 ರೈತರಿಗೆ 16.52 ಕೋಟಿ ಬೆಳೆವಿಮೆ ಬಾಕಿ ಮೊತ್ತ ಬಿಡುಗಡೆ ಮಾಡಿದ್ದಾರೆ. ಬಹು ವರ್ಷಗಳಿಂದ ತಾಂತ್ರಿಕ ಕಾರಣಗಳಿಗಾಗಿ ಬಾಕಿ ಉಳಿದಿದ್ದ ರೈತರ ಬೆಳೆ ವಿಮೆ ಮೊತ್ತ ಕೊನೆಗೂ ಬಿಡುಗಡೆಯಾಗಿದೆ.
ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಬೆಳೆವಿಮೆ ತುಂಬಿ, ಬೆಳೆ ಸಮೀಕ್ಷೆ ವಿವರಗಳು ಹೊಂದಾಣಿಕೆಯಾಗದೆ 9,204 ರೈತರ 16,52,71,712 ರೂ. ಬಿಡುಗಡೆಯಾಗದೇ ಬಹುದಿನಗಳಿಂದ ನೆನೆಗುದಿಗೆ ಬಿದ್ದಿತ್ತು. ಈ ಪ್ರಕರಣಗಳಿಗೆ ಸಂಬಂಧಿಸಿ ಬೆಳೆವಿಮೆ ಕಂಪನಿಗೆ ಸಾಕಷ್ಟು ಭಾರಿ ಮನವಿ ಮಾಡಿದ್ರೂ ಪರಿಹಾರ ಸಿಕ್ಕಿರಲಿಲ್ಲ. ಸವಣೂರಿನ 1,307 ರೈತರಿಗೆ ರೂ.2,11,30,063/-, ಶಿಗ್ಗಾಂವ ತಾಲೂಕಿನ 580 ರೈತರಿಗೆ ರೂ.1,51,01,823/-, ಹಾವೇರಿ ತಾಲೂಕಿನ 2,341 ರೈತರಿಗೆ ರೂ.4,01,03,716/-, ಹಾನಗಲ್ ತಾಲೂಕಿನ 1,120 ರೈತರಿಗೆ ರೂ.2,65,61,164/-, ಬ್ಯಾಡಗಿ ತಾಲೂಕಿನ 1,788 ರೈತರಿಗೆ ರೂ.4,18,18,746/-, ಹಿರೇಕೆರೂರು ತಾಲೂಕಿನ 1,330 ರೈತರಿಗೆ ರೂ.73,09,232 ಹಾಗೂ ರಾಣೇಬೆನ್ನೂರು ತಾಲೂಕಿನ 738 ರೈತರಿಗೆ ರೂ.1,32,46,712 ಮೊತ್ತ ಬಿಡುಗಡೆಯಾಗಿದೆ. ಆದ್ರೆ, ಈ ವರ್ಷವೂ ಮಳೆಯಿಂದ ಸಾಕಷ್ಟು ಬೆಳೆಹಾನಿಯಾಗಿದ್ದು, ತಕ್ಷಣ ಬೆಳೆವಿಮೆ ನೀಡುವಂತೆ ರೈತರು ಒತ್ತಾಯ ಮಾಡಿದ್ದು ಹೋರಾಟಕ್ಕೆ ಸಿದ್ದತೆ ನಡೆಸಿದ್ದಾರೆ.
ನಿರಂತರವಾಗಿ ಹೋರಾಟ ಮಾಡಿದ ಫಲವಾಗಿ ಬಾಕಿ ಉಳಿದಿದ್ದ ಬೆಳೆವಿಮೆ ಹಣ ರೈತರ ಖಾತೆಗಳಿಗೆ ಜಮಾ ಆಗುತ್ತಿದೆ. ಇನ್ನೂ ಹಲವು ವರ್ಷಗಳ ಬೆಳೆವಿಮೆ ಮೊತ್ತ ತಾಂತ್ರಿಕ ಕಾರಣದಿಂದಾಗಿ ಬಾಕಿ ಉಳಿದಿದ್ದು,ಇವುಗಳನ್ನು ಬಿಡುಗಡೆ ಮಾಡಲಿ ಎನ್ನುವುದು ರೈತರ ಆಶಯ.
ವೀರೇಶ ಬಾರ್ಕಿ, ಪವರ್ ಟಿವಿ ಹಾವೇರಿ.