ಸ್ಯಾಂಡಲ್ವುಡ್ ನಟಿ ಅಮೂಲ್ಯ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಜನ್ಮದಿನಕ್ಕೆ ಶುಭ ಕೋರುತ್ತಿದ್ದಾರೆ. ಕುಟುಂಬದವರು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರಿಂದಲೂ ಶುಭಾಶಯಗಳು ಹರಿದುಬರುತ್ತಿವೆ.
ಜಗದೀಶ್ ಜೊತೆ ಮದುವೆ ಆದ ಬಳಿಕ ಅಮೂಲ್ಯ ಅವರು ನಟನೆಯಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ. ಅವರು ಆದಷ್ಟು ಬೇಗ ಹೊಸ ಸಿನಿಮಾ ಒಪ್ಪಿಕೊಳ್ಳಲಿ ಎಂಬುದು ಅಭಿಮಾನಿಗಳ ಬಯಕೆ. ಈ ವರ್ಷ ಜೂನ್ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ ಅವರು ಸದ್ಯಕ್ಕೆ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಪತಿ ಜಗದೀಶ್ ವಿಶೇಷವಾಗಿ ವಿಶ್ ಮಾಡಿಕೊಂಡಿದ್ದಾರೆ. ತಮ್ಮ ಪಾಲಿಗೆ ಈ ದಿನವೇ ‘ವ್ಯಾಲೆಂಟೈನ್ ಡೇ’ ಎಂದು ಹೇಳಿದ್ದಾರೆ. ಅಮೂಲ್ಯ ಜತೆ ಕ್ಲಿಕ್ಕಿಸಿಕೊಂಡಿರುವ ಹತ್ತಾರು ಫೋಟೋಗಳನ್ನು ಜಗದೀಶ್ ಅವರು ಹಂಚಿಕೊಂಡಿದ್ದಾರೆ.
ನನಗೆ ಸೆಪ್ಟೆಂಬರ್ 14 ವ್ಯಾಲೆಂಟೈನ್ ಡೇ. ಹುಟ್ಟುಹಬ್ಬದ ಶುಭಾಶಯಗಳು ಅಮೂಲ್ಯ. ನೀನು ಯಾವಾಗಲೂ ಮಿನುಗುವ ನಕ್ಷತ್ರವಾಗಿರಬೇಕು. ಇದು ನಾವು ಕಳೆದ ಪ್ರೀತಿಯ ಕ್ಷಣಗಳು’ ಎಂದು ಈ ಪೋಸ್ಟ್ಗೆ ಅವರು ಕ್ಯಾಪ್ಷನ್ ನೀಡಿದ್ದಾರೆ.