ಪಾಕಿಸ್ತಾನದಲ್ಲಿ ಭಾರಿ ಪ್ರವಾಹದಿಂದಾಗಿ ಸುಮಾರು 3 ಲಕ್ಷ ಕೋಟಿ ರೂಪಾಯಿಯಷ್ಟು ಆರ್ಥಿಕ ನಷ್ಟವುಂಟಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.
ಕಳೆದ ವಾರ ಪಾಕಿಸ್ತಾನದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಸುಮಾರು 2 ಲಕ್ಷ ಕೋಟಿ ರೂಪಾಯಿಯಷ್ಟು ಹಾನಿ ಸಂಭವಿಸಿರಬಹುದೆಂದು ಅಂದಾಜಿಸಿದ್ದರು. ಆದರೆ, ಅವರು ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ನಷ್ಟವುಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರವಾಹದಲ್ಲುಂಟಾದ ನಷ್ಟದ ಅಂದಾಜು ಕುರಿತು ಚರ್ಚಿಸಲು ರಾಷ್ಟ್ರೀಯ ಪ್ರವಾಹ ಪ್ರತಿಕ್ರಿಯೆ ಕೇಂದ್ರ ಸಭೆಯಲ್ಲಿ ಪ್ರವಾಹದಿಂದಾಗಿ ಪಾಕಿಸ್ತಾನ ಆರ್ಥಿಕ ಪರಿಸ್ಥಿತಿ ಮೇಲೆ ಸುಮಾರು ₹ 3 ಲಕ್ಷ ಕೋಟಿಯಷ್ಟು ನಷ್ಟವುಂಟಾಗಿದೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ. ಇತ್ತ, ಮನೆ ಮಠ ಕಳೆದು ಕೊಂಡು ಲಕ್ಷಾಂತರ ಜನರು ಬೀದಿ ಪಾಲಾಗಿದ್ದಾರೆ. ತುತ್ತು ಅನ್ನಕ್ಕೂ ಜನ ಪರದಾಡ್ತಿದ್ದು, ಮಕ್ಕಳ ಪಾಡ ಹೇಳತೀರದಾಗಿದೆ. ಸಾವಿರಾರ ಜನ ಬೇರೆಡೆ ವಲಸೆ ಹೋಗ್ತಿದ್ದಾರೆ.