ಬೆಂಗಳೂರು : ಕಳೆದ ಒಂದುವರೆ ತಿಂಗಳಿಂದ ಎಡೆಬಿಡದೆ ಸುರಿಯುತ್ತಿರೋ ಮಳೆಯಿಂದಾಗಿ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರ ಜೊತೆಗೆ ಬೆಂಗಳೂರಿನ ಎರಡು ವಲಯದಲ್ಲಿ ಅತಿ ಹೆಚ್ಚು ಸಮಸ್ಯೆಯಾಗಿದ್ದು, ಅತಿವೃಷ್ಟಿ ಬಗ್ಗೆ ಚರ್ಚಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಪಕ್ಷದ ನಾಯಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಿಲುವಳಿ ಮಂಡಿಸಿದ್ರು. ಹೀಗಾಗಿ ನಿಯಮ 60ರ ಬದಲಾಗಿ 69ರ ಅಡಿ ಚರ್ಚೆ ನಡೆಸಲು ಸ್ಪೀಕರ್ ಕಾಗೇರಿ ಅವಕಾಶ ನೀಡಿದ್ರು.
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಅತೀ ಹೆಚ್ಚು ಮಳೆಯಾಗಲಿದೆ ಅನ್ನೋ ಬಗ್ಗೆ ಹವಾಮಾನ ಇಲಾಖೆ ತಜ್ಞರು ಮೊದಲೇ ತಿಳಿಸಿದ್ರು. ಆದ್ರೆ ಸರ್ಕಾರದ ನಿರ್ಲಕ್ಷ್ಯದಿಂದ ಮತ್ತು ಬೇಜವಾಬ್ದಾರಿಯಿಂದ ಇಷ್ಟೆಲ್ಲಾ ಅನಾಹುತ ಆಗಿದೆ ಅಂತ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು.
ಸೆಲೆಬ್ರಿಟಿಗಳು ಇರೋ ಯಮಲೂರಿನಲ್ಲಿ ಮಳೆಯಾಗಿದ್ದು, ಬೋಟಿನಲ್ಲೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದೆ. ಈ ವೇಳೆ ಸ್ಥಳೀಯರು ನನ್ನ ಬಳಿ ಸಮಸ್ಯೆ ಹೇಳಿಕೊಂಡಿದ್ದಾರೆ. ಮಳೆಗೆ ಸಿಲುಕಿ ಕೋಟ್ಯಂತರ ಬೆಲೆ ಬಾಳುವ ಕಾರು, ಸ್ಕೂಟರ್, ಮನೆಯ ವಸ್ತುಗಳು ಹಾಳಾಗಿವೆ. ಇದಕ್ಕೆ ಪರಿಹಾರ ಕೊಡಿಸುವಂತೆ ಜನ ತನ್ನ ಬಳಿ ಮನವಿ ಮಾಡಿದ್ದಾರೆ. ಇಷ್ಟೆಲ್ಲಾ ಅನಾಹುತಕ್ಕೆ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರೋದೇ ಕಾರಣ. ಅದೆಲ್ಲವನ್ನೂ ಸರಿ ಪಡಿಸುವಂತೆ ಸಿದ್ದು ಸದನದಲ್ಲಿ ಆಗ್ರಹಿಸಿದ್ರು.
ಸಿದ್ದರಾಮಯ್ಯ ಆರೋಪಗಳಿಗೆ ಕೌಂಟರ್ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಹಾನಿಯಾದ ಸ್ಥಳಕ್ಕೆ ನಾನು ನಡೆದುಕೊಂಡೇ ಭೇಟಿ ನೀಡಿದ್ದೆ. ಒಂದುವರೆ ಅಡಿ ನೀರಲ್ಲಿ ಬೋಟ್‌ನಲ್ಲಿ ಹೋಗಿರಲಿಲ್ಲ ಅಂತ ಸಿದ್ದರಾಮಯ್ಯ ಕಾಲೆಳೆದರು.
ಇದೇ ಚರ್ಚೆ ವೇಳೆ ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ, ದೊಡ್ಡ ದೊಡ್ಡ ಬಿಲ್ಡರ್‌ಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಒತ್ತುವರಿ ತೆರವು ಕಾರ್ಯ ನಿಲ್ಲಿಸದಂತೆ ಮನವಿ ಮಾಡಿದ್ರು. ಇದಕ್ಕೆ ವಿಪಕ್ಷಗಳು ಕೂಡ ಸಹಕಾರ ನೀಡುವಂತೆ ಸದನದಲ್ಲಿ ಮನವಿ ಮಾಡಿದ್ರು. ಬೆಂಗಳೂರಿನ ಸಮಸ್ಯೆ ಯುದ್ದೋಪಾದಿಯಲ್ಲಿ ಕೆಲಸ ಮಾಡೋ ಮೂಲಕ, ಬಗೆಹರಿಸುತ್ತೇವೆ ಅಂತ ಸಿಎಂ ಬಸವರಾಜ್ ಬೊಮ್ಮಾಯಿ ಸದನದಲ್ಲಿ ಭರವಸೆ ನೀಡಿದ್ರು.
ಒಟ್ಟಿನಲ್ಲಿ, ಆದ್ಯತೆ ಮೇರೆಗೆ ರಾಜ್ಯದ ನೆರೆ ವಿಚಾರವಾಗಿ ಚರ್ಚೆ ಆರಂಭವಾಗಿದೆ. ಸಿದ್ದರಾಮಯ್ಯ ಸದನದ ಗಮನ ಸೆಳೆದ್ರು. ಈ ವಿಚಾರವಾಗಿ ವಿಧಾನಸಭೆಯಲ್ಲಿ ಚರ್ಚೆ ಮುಂದುವರೆಯಲಿದೆ.
ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು