ಮಂಡ್ಯ: ನಾನು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರೆ ಈ ಬಗ್ಗೆ ದಾಖಲಾತಿ ಇದ್ರೆ ಬಿಡುಗಡೆಮಾಡಲಿ, ನಾನು ಬಹಿರಂಗವಾಗಿ ಚರ್ಚೆಗೆ ಸಿದ್ದಳಿದ್ದೇನೆ ಎಂದು ಜೆಡಿಎಸ್ ಶಾಸಕರಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಓಪನ್ ಚಾಲೆಂಜ್ ಹಾಕಿದ್ದಾರೆ.
ಇತ್ತೀಚಿಗೆ ಸುಮಲತಾ ಅಂಬರೀಶ್ ವಿರುದ್ಧ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು, ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಹರಿಹಾಯ್ದಿದ್ದರು. ಈ ಬಗ್ಗೆ ಮಂಡ್ಯ ತಾಲೂಕಿನ ಬಿ. ಹೊಸೂರು ಕಾಲೋನಿಯಲ್ಲಿ ಮಾತನಾಡಿದ ಸುಮಲತಾ, ಒಬ್ಬರು ಕುರಿತು ಮಾತನಾಡುವಾಗ ನೈತಿಕತೆ ಇರಬೇಕು. ನಾನು ಕಮೀಷನ್ ಪಡೆಯೋಕೆ ಇಲ್ಲಿ ಎಂಪಿ ಆಗಿಲ್ಲ ಎಂದು ಸುಮಲತಾ ಅಂಬರೀಶ್ ಅವರು ಹೇಳಿದರು.
ನಾನು ಅಂಬರೀಶ್ ಹೆಂಡತಿ, ನಮಗೆ ಹಾಗೂ ನಮ್ಮ ಕುಟುಂಬಕ್ಕೆ ಯಾವುದೇ ರೀತಿಯಾದ ತೊಂದರೆ ಇಲ್ಲ. ಹಣ ಮಾಡೋ ಅವಶ್ಯಕತೆ ಕೂಡ ನಮ್ಮ ಮುಂದಿಲ್ಲ. ನಾನು ಕಮೀಷನ್ ಪಡೆದಿದ್ದೇನೆಂದು ಹೇಳುತ್ತಾರಲ್ವ, ನೇರವಾಗಿ ಚಾಲೆಂಜ್ ಹಾಕುತ್ತಿರುವೆ. ಬನ್ನಿ ಮೇಲುಕೋಟೆಗೆ ಹೋಗೋಣ, ಅಲ್ಲೇ ದೇವರ ಮುಂದೆ ಆಣೆ ಮಾಡ್ಲಿ, ನನ್ನ ಬಗ್ಗೆ ಮಾತನಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಎಂದರು.
ಇನ್ನು ಮಾನ ಇದ್ದವರಿಗೆ ಮಾನನಷ್ಟ ಮೊಕದ್ದಮೆ ಹಾಕಬಹುದು. ಆದರೆ, ಈ ದಳಪತಿಗಳಿಗೆ ಅದು ಇಲ್ವಲ್ಲ ಎಂದು ದಳಪತಿಗಳ ವಿರುದ್ದ ಸಂಸದೆ ಸುಮಲತಾ ಗುಡುಗಿದರು.