ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆದಿದೆ. ಬರೀ ಚುನಾವಣೆ ಎದುರಿಸೋಕೆ ಅಷ್ಟೇ ಅಲ್ಲ. ಬದಲಿಗೆ ಪ್ರಬಲ ಎನ್‌ಡಿಎ ಪಡೆಯನ್ನು ಕಟ್ಟಿ ಹಾಕುವ ತಂತ್ರ ನಡೆದಿದೆ. ಹೌದು, ಮೋದಿ ನೇತೃತ್ವದಲ್ಲಿ ಮತ್ತೆ ಲೋಕಸಭಾ ಚುನಾವಣೆ ಗೆಲ್ಲೋದಕ್ಕೆ ಬಿಜೆಪಿ ಪಡೆ ಒಂದ್ಕಡೆ ಕಸರತ್ತು ನಡೆಸಿದ್ರೆ, ಮತ್ತೊಂದು ಕಡೆ ಎನ್‌ಡಿಎ ವಿರುದ್ಧ ಪರ್ಯಾಯ ಶಕ್ತಿಗೆ ಬಲ ತುಂಬವ ಕೆಲಸ ನಡೆದಿದೆ. ಈ ನಿಟ್ಟಿನಲ್ಲಿ ತೆಲಂಗಾಣ ಸಿಎಂ ದಂಡಯಾತ್ರೆ ಮಾಡ್ತಿದ್ದಾರೆ. ಆ ಭಾಗವಾಗಿ ಈಗಾಗಲೇ ದೇಶದ ಪ್ರಮುಖ ಪ್ರದೇಶಿಕ ಪಕ್ಷಗಳನ್ನು ಒಗ್ಗೂಡುವ ಕೆಲ್ಸ ಮಾಡ್ತಿದ್ದಾರೆ.
ಈ ಮಧ್ಯೆ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ರಾಷ್ಟ್ರೀಯ ರಾಜಕಾರಣ ಪ್ರವೇಶಿಸುವ ಸುಳಿವು ನೀಡಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಯೋಜನೆ ರೂಪಿಸುತ್ತಿರುವ ಅವರು ದಸರಾ ಹಬ್ಬದ ವೇಳೆಗೆ ಈ ಕುರಿತು ಮಹತ್ವದ ಘೋಷಣೆ ಮಾಡಲಿದ್ದಾರೆ ಎನ್ನಲಾಗ್ತಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಭೇಟಿ ಬಳಿಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತೆಲಂಗಾಣ ಸಿಎಂ ಕೆಸಿಆರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಒಟ್ಟುಗೂಡಿ BJP ಎದುರಿಸಲು ತಯಾರಿ ನಡೆದಿದೆ.
ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕ ಎಂಬ ಸಂದೇಶ ರವಾನಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ರೆ ಮತ್ತಷ್ಟು ಬಲ ಬರಲಿದೆ ಎಂದು ಅರಿತಿರುವ ನಾಯಕರು ಇದೀಗ ಚುನಾವಣಾ ಪೂರ್ವ ಬಲ ಪ್ರದರ್ಶನಕ್ಕೆ ಅಖಾಡ ರೆಡಿ ಮಾಡಿದ್ದಾರೆ. ಇದ್ರ ಜೊತೆಗೆ, ಪರ್ಯಾಯ ಶಕ್ತಿಯ ರೂಪರೇಷೆಯ ನಿರ್ಧಾರಕ್ಕೆ ಹೆಚ್‌ಡಿಕೆ-ಕೆಸಿಆರ್ ಸಭೆಯಲ್ಲಿ ಚರ್ಚೆ ನಡೆದಿದೆ.
ನಿತೀಶ್ ಕುಮಾರ್, ಕೆ.ಚಂದ್ರಶೇಖರ್ ರಾವ್, ಹೆಚ್.ಡಿ.ಕುಮಾರಸ್ವಾಮಿ, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಒಗ್ಗಟ್ಟು ಪ್ರದರ್ಶನಕ್ಕೆ ಕಸರತ್ತು ನಡೆಸುತ್ತಿದ್ದಾರೆ. ವಿಜಯದಶಮಿಗೆ ಹೊಸ ರಾಜಕೀಯ ಪರ್ಯಾಯ ಶಕ್ತಿ ರೂಪಿಸಲು ಚಿಂತನೆ ನಡೆಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗು ತೆಲಂಗಾಣ ಸಿಎಂ ಕೆಸಿಆರ್ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿದ್ರು. ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಸದೃಢವಾಗಿವೆ. ಪರಸ್ಪರ ಸಹಕಾರ ಮುಂದುವರಿಸಿ ಮುಂದೆ ಪರ್ಯಾಯ ರಾಜಕೀಯ ಶಕ್ತಿಯನ್ನು ಬಲಪಡಿಸಿ ಪ್ರಾದೇಶಿಕ ಪಕ್ಷಗಳಲ್ಲಿ ಆಯಾ ರಾಜ್ಯಗಳಲ್ಲಿ ಅಧಿಕಾರದ ಜೊತೆಗೆ, ಕೇಂದ್ರದಲ್ಲಿ ಪರ್ಯಾಯ ಒಕ್ಕೂಟವನ್ನು ಅಧಿಕಾರಕ್ಕೆ ತರಲು ಪ್ರಯತ್ನ ನಡೆಯುತ್ತಿವೆ.
ಸದ್ಯಕ್ಕೆ ಕಾಂಗ್ರೆಸ್ ಪಕ್ಷವು ಕೆ.ಚಂದ್ರಶೇಖರ್ ರಾವ್ ಅವರ ಜೊತೆ ಕೈಜೋಡಿಸಲು ಉತ್ಸುಕವಾಗಿಲ್ಲ. ಮತ್ತೊಂದೆಡೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ರಾಷ್ಟ್ರ ರಾಜಕಾರಣದ ಮೇಲೆ ಕಣ್ಣಿಟ್ಟಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಹ ಪ್ರಧಾನಮಂತ್ರಿ ಹುದ್ದೆಯ ಆಕಾಂಕ್ಷಿಯೇ ಎಂದು ವ್ಯಾಖ್ಯಾನಿಸಲಾಗಿದೆ. ಈ ಎಲ್ಲರೂ ಕೆ.ಚಂದ್ರಶೇಖರ್ ರಾವ್ ಅವರಿಗೆ ಬೆಂಬಲ ನೀಡುವರೋ ಅಥವಾ ಸ್ಪರ್ಧೆ ನೀಡುವರೋ ಕಾದುನೋಡಬೇಕಿದೆ.
ರೂಪೇಶ್ ಬೈಂದೂರು, ಪವರ್ ಟಿವಿ ಬೆಂಗಳೂರು