ಆನೇಕಲ್ : ಮಹಾಮಳೆಯಿಂದ ಕೇವಲ ಬೆಂಗಳೂರು ನಗರ ಮಾತ್ರವಲ್ಲ. ಬೆಂಗಳೂರು ಹೊರ ವಲಯದ ಪ್ರದೇಶಗಳಲ್ಲೂ ಸಾಕಷ್ಟು ಅವಾಂತರಗಳಾಗಿವೆ. ಆನೇಕಲ್ ತಾಲೂಕಿನ ಹೆನ್ನಾಗರ ಹಾಗೂ ಮುತ್ತಾನಲ್ಲೂರು ಕೆರೆ ಕೋಡಿ ಬಿದ್ದಿದೆ. ನೂರಾರು ಎಕರೆ ಗುಲಾಬಿ, ಸೇವಂತಿ, ಬಾಳೆ ತೋಟಗಳು ನೆರೆಗೆ ಜಲಾವೃತವಾಗಿವೆ.
ರಾಜಕಾಲುವೆಗಳು ಕಿರಿದಾಗಿರುವುದರಿಂದ ಹೆಚ್ಚುವರಿ ನೀರು ತೋಟಗಳಿಗೆ ನುಗ್ಗಿದೆ. ಇದರಿಂದ ನೂರಾರು ಎಕರೆ ಹೂವಿನ ಬೆಳೆ ನಾಶವಾಗಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ತೇವಾಂಶ ಹೆಚ್ಚಾಗಿ ಗುಲಾಬಿ ತೋಟಗಳು ಕೊಳೆಯುವ ಸ್ಥಿತಿಗೆ ತಲುಪಿವೆ.
ಆನೇಕಲ್‌ನ ಸಿಂಗೇನ ಅಗ್ರಹಾರದಲ್ಲೂ ಸಹ ಸುಮಾರು 50 ಎಕರೆಯಷ್ಟು ಕೃಷಿ ಭೂಮಿ ಜಲಾವೃತವಾಗಿದೆ. ವಾಡಿಕೆಗಿಂತಲೂ ಅಧಿಕ ಮಳೆಯಾಗಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರಿ ಮಳೆಯಿಂದಾಗಿ ಸುಮಾರು 300ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಸಂಪೂರ್ಣ ಹಾನಿಯಾಗಿದೆ. ಮಳೆ ಹೀಗೆ ಮುಂದುವರೆದರೆ ಅಳಿದುಳಿದ ಬೆಳೆಗಳು ನೀರು ಪಾಲಾಗುತ್ತವೆ. ಸಾಲ ಮಾಡಿ ಹಗಲಿರುಳು ಕಷ್ಟಪಟ್ಟ ದುಡಿದ ಬೆಳೆ ಹಾನಿಯಾಗಿದ್ದು, ಅಧಿಕಾರಿಗಳು ಕೂಡಲೇ ಎಚ್ಚೆತ್ತು ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ವಿತರಿಸಬೇಕಿದೆ.
ಒಟ್ಟಿನಲ್ಲಿ ರಾಗಿ ಕಣಜ ಎಂದೇ ಖ್ಯಾತಿಗಳಿಸಿರುವ ಆನೇಕಲ್ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದ ಬೆಳೆ ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಬೆಳೆ ಹಾನಿ ಸಮೀಕ್ಷೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಿ ಅನ್ನೋದೇ ಪವರ್ ಟಿವಿ ಆಶಯ.
ರಾಘವೇಂದ್ರ, ಪವರ್ ಟಿವಿ, ಆನೇಕಲ್