ಬೆಂಗಳೂರು : ಟ್ರ್ಯಾಕ್ಟರ್ ಬೋಟು ಟಿಪ್ಪರ್ ಗಾಡಿ ಇಷ್ಟೆ ಇಷ್ಟೇ ಈ ಯಮಲೂರಿನಲ್ಲಿ ಓಡಾಟಕ್ಕೆ..! ಮಳೆ ಬಂದು ನಿಂತ್ರೂ ನೀರಿನ ಅಬ್ಬರ ಕಡಿಮೆಯಾಗಿಲ್ಲ. ಕೋಟಿ ಕೋಟಿ ಮೌಲ್ಯದ ವಿಲ್ಲಾಗಳು, ಐಟಿ ಕಂಪನಿಗಳು, ಅಪಾರ್ಟ್ಮೆಂಟ್ ರಸ್ತೆ ಎಲ್ಲವೂ ನೀರಿನಲ್ಲಿ ಮುಳುಗಿವೆ. ಆದ್ರೆ, ಇದಕ್ಕೆ ಕೇವಲ ಮಳೆ ಮಾತ್ರವಲ್ಲ ಕಾರಣ..! ಪ್ರತಿಷ್ಠಿತ ಬಿಲ್ಡರ್ ಕಂಪನಿಗಳು ಒತ್ತುವರಿ ಮಾಡಿಕೊಂಡಿದ್ದೇ ಕಾರಣ. ಎಪ್ಸಿಲಾನ್ ವಿಲ್ಲಾ, ದಿವ್ಯಾ ಚೇಂಬರ್ ಬಳಿ ರಾಜಕಾಲುವೆ ಒತ್ತುವರಿಯಾಗಿದ್ದೇ ಇಡೀ ಯಮಲೂರು ಮುಳುಗಡೆಯಾಗಲು ಕಾರಣವಾಗಿದೆ. ಇದನ್ನು ಸ್ವತಃ ಸ್ಥಳೀಯ ಶಾಸಕರು ಹಾಗೂ ಮುಖ್ಯಮಂತ್ರಿಗಳೇ ಒಪ್ಪಿಕೊಳ್ತಿದ್ದಾರೆ.
ಇನ್ನೂ ಇಡೀ ಯಮಲೂರಿನಲ್ಲಿ ಭಯಾನಕ ಪ್ರವಾಹದ ಬಳಿಕ ಅಪರೇಷನ್ ಬುಲ್ಡೋಜರ್ ದೊಡ್ಡವರ ಬುಡಕ್ಕೆ ಬರಬೇಕಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡ ದಿವ್ಯಾ ವಿಲ್ಲಾ ಪಕ್ಕದ ಭಾಗದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆಗಬೇಕು ಅಂತ ಸ್ಥಳೀಯರು ಆಗ್ರಹ ವ್ಯಕ್ತಪಡಿಸಿದ್ದಾರೆ.
ಇನ್ನು ಬೆಂಗಳೂರಿಗೆ ಈ ಸ್ಥಿತಿ ನಿರ್ಮಾಣವಾಗಲು ಮುಖ್ಯ ಕಾರಣ ಕೆರೆಗಳ ಒತ್ತುವರಿ ಹಾಗೂ ರಾಜಕಾಲುವೆಗಳ ಮೇಲೆ ಮನೆ, ಅಪಾರ್ಟ್ಮೆಂಟ್ ಹಾಗೂ ಐಟಿ ಕಂಪನಿಗಳನ್ನು ಕಟ್ಟಿರುವುದು ಅಂತ ಆರೋಪಿಸಿದ್ದಾರೆ. ಹೀಗಾಗಿ ಸರ್ಕಾರ ಬಿಲ್ಡರ್‌ಗಳನ್ನು ಹಿಡಿದು ಮೊದಲು ಅವರಿಗೆ ಶಿಕ್ಷೆ ಕೊಡಬೇಕು ಮಧ್ಯಮ ವರ್ಗದವರಿಗೆ ನ್ಯಾಯ ದೊರಕಿಸಬೇಕು ಅಂತ ಆಗ್ರಹಿಸಿದ್ದಾರೆ.
ಕಾಲುವೆ ಚರಂಡಿ ಫುಟ್ ಪಾತ್ ಎಲ್ಲವನ್ನೂ ಗುಳುಂ ಮಾಡಿದ ಪರಿಣಾಮ, ಬೇಕಾಬಿಟ್ಟಿ ರಾಜಕಾಲುವೆಯನ್ನು ಒತ್ತುವರಿ ಮಾಡಲು ಅವಕಾಶ ಕೊಟ್ಟ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನ ಸಂಕಷ್ಟ ಪಡುವಂತಾ ವಾತಾವರಣ ನಿರ್ಮಾಣವಾಗಿದೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು