ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಇದ್ದಾಗ ತಾರತಮ್ಯ ಮಾಡಿದ್ದಾರೆ. ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ಕೊಟ್ಟಿದ್ದು, ಕರ್ನಾಟಕದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ದೊಡ್ಡಬಳ್ಳಾಪುರದಲ್ಲಿಂದು ಬಿಜೆಪಿ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವೆ, ಹಿಂದೂ ಕಾರ್ಯಕರ್ತರ ಸಾವಿನ ಬಗ್ಗೆ ರಾಹುಲ್ ಗಾಂಧಿ ಮಾತನಾಡಲಿಲ್ಲ. ಕನ್ಯಾಕುಮಾರಿಯಲ್ಲಿ ಕಾಂಗ್ರೆಸ್ ಆರಂಭಿಸಿರುವ ಭಾರತ್ ಜೋಡೋ ಯಾತ್ರೆ ಅಲ್ಲ. ಅದು ಭಾರತ್ ತೋಡೋ ಯಾತ್ರೆ ಎಂದು ಅಣುಕಿಸಿದರು.
ಕಾಂಗ್ರೆಸ್ ಸರ್ಕಾರ ಇದ್ದ ವೇಳೆಯಲ್ಲಿ ಸರ್ದಾರ ವಲ್ಲಾಭಾಯ್ ಪಟೇಲ್ ಅವರ ಒಂದು ಬ್ಯಾನರ್ ಕಾಣಲಿಲ್ಲ. ಪ್ರಧಾನಿ ಮೋದಿ ಬಹು ಹೆದ್ದಾರಿ ಯೋಜನೆ ಅಭಿವೃದ್ಧಿ ಪಡಿಸಿದ್ದಾರೆ. ಸ್ವಾಮಿ ವಿವೇಕಾನಂದರ ಪ್ರತಿಮೆಗೆ ರಾಹುಲ್ ಗಾಂಧಿ ಒಂದು ದಿನ ನಮಿಸಲಿಲ್ಲ. ಕಾಂಗ್ರೆಸ್ ದೇಶವನ್ನ ಇಬ್ಬಾಗ ಮಾಡುವ ಕೆಲಸ ಮಾಡುತ್ತಿದೆ ಎಂದು ಕನ್ನಡದಲ್ಲಿಯೇ ಸ್ಮೃತಿ ಇರಾನಿ ಮಾತನಾಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಇದ್ದಾಗ ಕರ್ನಾಟಕಕ್ಕೆ ಹಣಕಾಸು ಆಯೋಗದ ಮೂಲಕ ಕೊಟ್ಟಿದ್ದು 2 ಸಾವಿರ ಕೋಟಿ ಮಾತ್ರ, ಬಿಜೆಪಿ ಡಬಲ್ ಇಂಜಿನ್ ನ ಸರ್ಕಾರ ಕರ್ನಾಟಕಕ್ಕೆ ಹಣಕಾಸು ಆಯೋಗದಿಂದ 5 ಸಾವಿರ ಕೋಟಿ ಅನುದಾನ ಕೊಟ್ಟಿದೆ. ಕರ್ನಾಟಕದಲ್ಲಿ ರಸ್ತೆ ಮಾಡಲು 2022 ರಲ್ಲಿ ರಸ್ತೆ ಹೈವೇ ಅಭಿವೃದ್ಧಿಗೆ 9,700 ಕೋಟಿ ರೂ ಅನುದಾನ, ಕಳೆದ ಏಳು ವರ್ಷಗಳಲ್ಲಿ ಹೆದ್ದಾರಿಗಳ ಅಭಿವೃದ್ಧಿಗೆ 37 ಸಾವಿರ ಕೋಟಿ ರೂ ಕೊಡಲಾಗಿದೆ. ಭಾರತ್ ಮಾಲಾ ಯೋಜನೆ ಮೂಲಕ 55 ಸಾವಿರ ಕೋಟಿ ಕೊಡುವ ಉದ್ದೇಶ ಇದೆ ಎಂದು ಕೇಂದ್ರ ಸಚಿವೆ ತಿಳಿಸಿದರು.