ಗದಗ: ಜಿಲ್ಲೆಯಲ್ಲಿ ಸೋಮವಾರ ಸುರಿದ ಮಳೆ ಸಾಕಷ್ಟು ಅವಾಂತರಗಳನ್ನೇ ಸೃಷ್ಠಿ ಮಾಡಿದೆ. ಮನೆ, ಜಮೀನು, ಅಂಗಡಿ ಮುಗ್ಗಟ್ಟು, ಧವಸಧಾನ್ಯ ತನಗೆ ಸಿಕ್ಕಿದ್ದೆನ್ನೆಲ್ಲ ನುಂಗಿ ನೀರು ಕುಡಿದಿದೆ. ಇದಷ್ಟೇ ಅಲ್ಲದೇ ಮೂರು ಅಮಾಯಕ ಜೀವಗಳನ್ನೇ ಬಲಿ ಪಡೆದಿರೋ ರಕ್ಕಸ ಮಳೆರಾಯ ಅದೆಷ್ಟೋ ಕುಟುಂಬಗಳನ್ನ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ. ಇದೆಲ್ಲದರ ಮಧ್ಯೆ, ಭವಿಷ್ಯದ ಕನಸು ಕಾಣುತ್ತಾ ಶಾಲೆಯೇ ನನ್ನ ಉಸಿರು, ಶಾಲಾಜೀವನವೇ ನನ್ನ ಬದುಕು ಅಂತಿರೋ ಮುಗ್ಧ ಬಾಲಕಿಯ ಜೀವನದಲ್ಲೂ ವರುಣದೇವ ತನ್ನ ಹುಡುಗಾಟದ ಆಟವಾಡಿ ಹೋಗಿದ್ದಾನೆ.
ಹೌದು.. ಗದಗನ ಮಂಜುನಾಥ ನಗರದ ನಿವಾಸಿಯಾಗಿರುವ ಸುರಯ್ಯ ತನ್ನ ಅಜ್ಜಿ ಫಾತೀಮಾ ಹಂಡೇವಾಲಿ ಆಶ್ರಯದಲ್ಲಿ ಬೆಳೆಯುತ್ತಿದ್ದಾಳೆ. ಮಳೆಯಿಂದಾಗಿ ಮನೆಗೆ ನೀರು ಹೊಕ್ಕ ಪಠ್ಯ ಪುಸ್ತಕವೆಲ್ಲವೂ ನೀರಿನಿಂದ ತೊಯ್ಯಲ್ಪಟ್ಟಿವೆ. ಇದರಿಂದ ಬಾಲಕಿ ಗಳಗಳನೇ ಹತ್ತಿದ್ದಾಳೆ. ತನ್ನ ಮೊಮ್ಮಗಳ ಕಣ್ಣೀರು ಕಂಡು ಅಜ್ಜಿ ಗಳಗಳನೇ ಕಣ್ಣೀರುಹಾಕಿದ್ದಾಳೆ.
ಮಂಜುನಾಥ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ 5 ನೇ ತರಗತಿಯಲ್ಲಿ ಬಾಲಕಿ ಅಭ್ಯಾಸ ಮಾಡುತ್ತಿದ್ದಾಳೆ. ಅಜ್ಜಿ ಫಾತೀಮಾಗೆ ಹೆಣ್ಣು ಮೊಮ್ಮಮಗಳಾಗಿರೋ ಸುರಯ್ಯ ಚಿಕ್ಕಂದಿನಲ್ಲೇ ತಾಯಿಯನ್ನ ಕಳೆದುಕೊಂಡಿದ್ದಾಳೆ. ಸುರಯ್ಯಗೆ ಅಜ್ಜಿಯೇ ಎಲ್ಲ. ಹೀಗೆ ಕಷ್ಟಪಟ್ಟು ಸುರಯ್ಯಳನ್ನ ಸಾಕುತ್ತಿರೋ ಅಜ್ಜಿ ಫಾತೀಮಾಗೆ ತನ್ನ ಮೊಮ್ಮಗಳಂದ್ರೆ, ಪಂಚಪ್ರಾಣ. ಆದ್ರೆ ಸದ್ಯ ಸುರಯ್ಯ ಕಣ್ಣೀರು ಹಾಕ್ತಿರೋದನ್ನ ಅಜ್ಜಿಗೆ ನೋಡೋಕಾಗ್ತಿಲ್ಲ.
ಅಜ್ಜಿ ಮೊಮ್ಮಗಳಿಬ್ರು ರಾತ್ರಿ ಮನೆಗೆ ಬೀಗ ಹಾಕಿ ಬೇರೆ ಮನೆಗೆ ಹೋಗಿದ್ದಾರೆ. ಮರುದಿನ ಬೆಳಿಗ್ಗೆ ತಮ್ಮ ಮನೆಗೆ ಬಂದು ನೋಡುವಷ್ಟರಲ್ಲಿ ಮನೆಯಲ್ಲಿನ ವಸ್ತುಗಳೆಲ್ಲಾ ನೀರಲ್ಲಿ ಹೋಮ ಮಾಡಿದಂತಾಗಿವೆ. ಅದರಲ್ಲೂ ಬಾಲಕಿ ಸುರಯ್ಯಳ ಪುಸ್ತಕ, ನೋಟ್ ಬುಕ್, ಪೆನ್ನು, ಪೆನ್ಸಿಲ್, ನೋಟ್ಸ್, ಎಲ್ಲವೂ ಮಳೆನೀರಲ್ಲಿ ಮುಳಗಡೆಯಾಗಿದ್ದನ್ನ ಕಂಡು, ವಿದ್ಯಾರ್ಥಿನಿಗೆ ದಿಕ್ಕೇ ತೋಚದಂತಾಗಿದೆ. ಕಳೆದ ಆರು ತಿಂಗಳಿಂದ ಕಣ್ಣು ಪುಳಕಿಸದಂತೆ ಅಭ್ಯಾಸ ಮಾಡ್ತಾ, ಪ್ರತಿದಿನ ರಾತ್ರಿ 11 ಗಂಟೆವರೆಗೆ ನಿದ್ದೆಗೆಟ್ಟು ಬರೆದ ನೋಟ್ಸ್ ಗಳೆಲ್ಲ ನೀರಲ್ಲಿ ಹಾಳಾಗಿರೋದನ್ನ ಕಂಡು ಅಜ್ಜಿ ಫಾತೀಮಾ, ಹಾಗೂ ಬಾಲಕಿ ಸುರಯ್ಯ ಇಬ್ಬರೂ ಸಹ ಕಣ್ಣೀರು ಹಾಕಿದ್ದಾರೆ.
ಒಂದೆಡೆ ತಾಯಿ ಕಳೆದುಕೊಂಡ ಮೊಮ್ಮಗಳ ಮೇಲಿನ ಅಜ್ಜಿಯ ಮಮಕಾರ, ಇತ್ತ ಮುಗ್ಧಬಾಲಕಿ ಸುರಯ್ಯಳ ಶಾಲಾ ಶಿಕ್ಷಣದ ಪಠ್ಯ ಪುಸ್ತಕಗಳ ಮೇಲಿನ ಆಸಕ್ತಿ ಹಾಗೂ ಮುಗ್ಧಪ್ರೀತಿ ನೋಡುಗರ ಕಣ್ಣಂಚನ್ನ ಒದ್ದೆ ಮಾಡದೇ ಇರಲಾರದು.
ಮಹಲಿಂಗೇಶ್ ಹಿರೇಮಠ, ಗದಗ