Monday, November 18, 2024

ಪ್ರವಾಹಕ್ಕೆ ಸಿಲುಕಿ ಇಬ್ಬರು ಪೊಲೀಸ್​ ಪೇದೆ ನಾಪತ್ತೆ, ಓರ್ವ ಪೇದೆಯ ಶವ ಪತ್ತೆ

ಕೊಪ್ಪಳ: ನಿರಂತರ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿದ್ದು, ಪ್ರವಾಹದಿಂದಾಗಿ ಇಬ್ಬರು ಪೊಲೀಸರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ಪೈಕಿ ಒಬ್ಬರ ಮೃತ ದೇಹ ಸಿಕ್ಕಿದ್ದು, ಇನ್ನೊಬ್ಬ ಪೊಲೀಸರ ಹುಡುಕಾಟ ನಡೆಸುತ್ತಿರುವ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ತೊಂಡಿಹಾಳ ಗ್ರಾಮದ ಬಳಿಯ ನಡೆದಿದೆ.

ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಹಳ್ಳಗಳಲ್ಲಿ ಭಾರಿ ಪ್ರಮಾಣದ ಪ್ರವಾಹ ಉಂಟಾಗಿದೆ. ಈ ಮಧ್ಯೆ ನಿನ್ನೆ ಸಂಜೆ ಕುಕನೂರು ತಾಲೂಕಿನ ತೊಂಡಿಹಾಳ ಗ್ರಾಮದ ಬಳಿಯಲ್ಲಿ ಹಳ್ಳಕ್ಕೆ ಭಾರಿ ಪ್ರಮಾಣದ ಪ್ರವಾಹ ಉಂಟಾಗಿತ್ತು.‌ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯ ಪೇದೆಗಳಾದ ನಿಂಗಪ್ಪ ಹಲವಾಗಲಿ ಹಾಗು ಮಹೇಶ ವಕ್ರದ ಎಂಬುವವರು ಬೈಕ್‌ನಲ್ಲಿ ಹಳ್ಳ ದಾಟಲು ಯತ್ನಿಸಿದಾಗ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದಾರೆ.

ರಾತ್ರಿಯ ವೇಳೆ ಅವರ ಬಗ್ಗೆ ಮಾಹಿತಿ ಸಿಗದ ಕಾರಣವಾಗಿ, ಇಂದು ಮುಂಜಾನೆ ಅವರು ಮುಂಡರಗಿ ಪೊಲೀಸ್ ಠಾಣೆಗೆ ಬಾರದ ಹಿನ್ನೆಲೆ ಫೋನಿನಲ್ಲಿ ಸಂಪರ್ಕಿಸಿದಾಗ ಇಬ್ಬರ ಫೋನು ಸ್ವಿಚ್ಡ್‌ ಆಫ್‌ ಆಗಿದೆ. ಈ ಫೋನು ತೊಂಡಿಹಾಳ ಹಳ್ಳದ ಬಳಿಯಲ್ಲಿ ಸ್ವಿಚ್ಡ್‌ ಆಫ್‌ ಆಗಿರುವುದು ಗೊತ್ತಾಗಿದೆ. ವಿಷಯ ತಿಳಿದು ಇಂದು ಮುಂಜಾನೆಯಿಂದಲೇ ಕೊಪ್ಪಳ ಅಗ್ನಿ ಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರ ಸಹಾಯದಿಂದ ಕಾರ್ಯಾಚರಣೆ ಮಾಡಿದ್ದು, ಮಧ್ಯಾಹ್ನ ವೇಳೆಗೆ ಹಳ್ಳದಿಂದ ಸುಮಾರು 8 ಕಿಮೀ ದೂರದಲ್ಲಿ ನಿಂಗಪ್ಪನ ಮೃತ ದೇಹ ಪತ್ತೆಯಾಗಿದೆ.‌

ಇನ್ನೊಬ್ಬ ಪೊಲೀಸ್​ ಪೇದೆ ಮಹೇಶ್‌ ನಾಪತ್ತೆಯಾಗಿದ್ದು, ಅವರಿಗಾಗಿ ಅಗ್ನಿ ಶಾಮಕ ದಳವು  ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಮಹೇಶ್‌ ಸಹ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದ್ದು, ನಿನ್ನೆ ಗಜೇಂದ್ರಗಡದಲ್ಲಿ ರೈತರ ಹೋರಾಟಕ್ಕೆ ಬಂದೋಬಸ್ತ್ ಒದಗಿಸಲು ಹೋಗಿದ್ದ ಇಬ್ಬರು ಮರಳಿ ವಾಪಸ್ಸಾಗುವಾಗ ಈ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES