ಬೆಂಗಳೂರು : ಎತ್ತ ನೋಡಿದ್ರೂ ನೀರೋ ನೀರು. ಕಾಲುವೆಯಂತಾಗಿರೋ ರಸ್ತೆಗಳು. ಕೆರೆಯಂತೆ ಕಾಣ್ತಿರೋ ತಗ್ಗು ಪ್ರದೇಶಗಳು. ಹರಿಯುತ್ತಿರೋ ನೀರಲ್ಲೇ ವಾಹನ ಸವಾರರ ಪರದಾಟ. ಮನೆ ಒಳಗೂ ನೀರು. ಮನೆಯ ಹೊರಗೂ ನೀರು. ಮನೆಯಲ್ಲಿದ್ದ ವಸ್ತುಗಳು ನೀರುಪಾಲಾಗಿದ್ರೆ. ಮನೆಯಲ್ಲಿದ್ದವರು ಬೀದಿಪಾಲಾಗುವಂತವಾಗಿದೆ. ಅಪಾರ್ಟ್ಗಳು ದ್ವೀಪಗಳಂತಾಗಿದ್ರೆ. ಬೇಸ್ಮೆಂಟ್ನಲ್ಲಿದ್ದ ವಾಹನಗಳು ಮುಳುಗಡೆಯಾಗಿದೆ. ಯಾವುದೂ ರಸ್ತೆ. ಯಾವುದೂ ಜನವಸತಿ ಪ್ರದೇಶ ಅನ್ನೋ ಗೊತ್ತಾಗುತ್ತಿಲ್ಲ. ಕಣ್ಣು ಹಾಯಿಸಿದಷ್ಟು ನೀರೋ ನೀರು. ಇದು ಭಾನುವಾರ ರಾತ್ರಿ ಸುರಿದ ರಣಚಂಡಿ ಮಳೆಯ ಎಫೆಕ್ಟ್.
ವರುಣಾರ್ಭಟಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಜನತೆ ತತ್ತರಿಸಿ ಹೋಗಿದ್ದಾರೆ. ಭಾನುವಾರ ಸಂಜೆಯಿಂದ ಸುರಿದ ಭಾರೀ ಮಳೆಗೆ ನಗರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಮಳೆ ನಿಂತರೂ ಹಲವು ಕಡೆಗಳಲ್ಲಿ ನದಿ ಹರಿಯುವಂತಹ ದೃಶ್ಯ ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಭಾನುವಾರ ಸಂಜೆ ಆರಂಭವಾದ ಮಳೆ ಸೋಮವಾರ ಬೆಳಗಿನ ಜಾವದವರೆಗೂ ಸುರಿದಿದೆ. ನಿರಂತರವಾಗಿ ಸುರಿದ ಭಾರೀ ಪ್ರಮಾಣದ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಬೆಂಗಳೂರಿನ ಪ್ರವಾಹ ದೃಶ್ಯಗಳು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇನ್ನು, ಭಾರೀ ಮಳೆಗೆ ಬೆಳ್ಳಂದೂರು ತತ್ತರಿಸಿ ಹೋಗಿದೆ. ಅದ್ರಲ್ಲೂ ಸ್ಲಂ ನಿವಾಸಿಗಳ ಪಾಡಂತೂ ಹೇಳತೀರಾದಾಗಿದೆ. ಗುಡಿಸಲುಗಳ ಒಳಗೆ ಕೊಳಚೆ ನೀರು ತುಂಬಿದ್ದು, ಮನೆಗಳಲ್ಲಿದ್ದ ಆಹಾರ ಸಾಮಾಗ್ರಿಗಳು ನೀರು ಪಾಲಾಗಿದೆ. ಬರೋಬ್ಬರಿ 1,500 ಕುಟುಂಬಗಳು ಬದುಕು ಬೀದಿಗೆ ಬಿದ್ದಿದೆ.
ಇತ್ತ ಕಾಡುಬಿಸನಹಳ್ಳಿಯಲ್ಲಿ KPTCL ಕಚೇರಿ ಮುಳುಗಡೆಯಾಗಿದ್ರೆ. ತಡರಾತ್ರಿಯಿಂದ ವಿದ್ಯುತ್ ಇಲ್ಲದೇ ಸ್ಥಳೀಯರ ಪರದಾಡಬೇಕಾಗಿತ್ತು. ವರುಣಾರ್ಭಟಕ್ಕೆ HALನಲ್ಲಿ ಮನೆಗಳಿಗೆ ನೀರು ನುಗ್ಗಿ ಭಾರಿ ಅವಾಂತರವಾಗಿದ್ರೆ.
ಇಂದಿರಾನಗರದಲ್ಲೂ ರಸ್ತೆಗಳು ಜಲಾವೃತವಾಗಿದ್ವು. ಬೆಂಗಳೂರು ವಿಮಾನ ನಿಲ್ದಾಣದ ಮುಂದೆ ಕೆರೆಯಂತೆ ನೀರು ನಿಂತಿದ್ರೆ. ಸಂಜಯನಗರದ ರಾಧಾಕೃಷ್ಣ ವಾರ್ಡ್ನಲ್ಲಿರುವ ಪಾರ್ಕ್ನಲ್ಲಿ ಸುಮಾರು 3 ಅಡಿಯಷ್ಟು ನೀರು ನಿಂತಿತ್ತು.
ಒಟ್ಟಾರೆ, ಭಾರೀ ಮಳೆಗೆ ಬೆಂಗಳೂರು ತತ್ತರಿಸಿದೆ. ಅನೇಕ ಏರಿಯಾಗಳು ಜಲಾವೃತಗೊಂಡಿವೆ. ನಗರದ ಬಹುತೇಕ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ನಗರದ ಔಟರ್ರಿಂಗ್ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು.