ಕಲಬುರಗಿ : ನಗರದ ಅಪ್ಪಾ ಕೆರೆ ಬಳಿ ನಡೆದ ಅದ್ದೂರಿ ಗಣೇಶ ಮೆರವಣಿಗೆ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸ್‌ಟೇಬಲ್ ಮೇಲೆ ಹಿರಿಯ ಪೊಲೀಸ್ ಅಧಿಕಾರಿ ಕಪಾಳಮೋಕ್ಷ ಮಾಡಿದ್ದಾರೆ. ಮೆರವಣಿಗೆ ವೇಳೆ ಕೆಲ ಪೋಲಿ ಹುಡುಗರ ಗುಂಪೊಂದು ಕೀಟಲೆ ಮಾಡುತ್ತಿದ್ದರು. ಈ ವೇಳೆ ಪರಿಸ್ಥಿತಿ ನಿಯಂತ್ರಿಸುತ್ತಿದ್ದ ಕಾನ್ಸ್‌ಟೇಬಲ್ ಸಿದ್ದಪ್ಪ ಬಿರಾದಾರ್ ಅವರಿಗೆ ಎಸಿಪಿ ಗಿರೀಶ್ ಎರಡ್ಮೂರು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಪರಿಣಾಮ ಸಿದ್ದಪ್ಪ ಕಿವಿಗೆ ಬಲವಾಗಿ ಪೆಟ್ಟಾಗಿದ್ದು ರಕ್ತಸ್ರಾವವಾಗಿದೆ. ಅಲ್ಲದೇ, ಕುತ್ತಿಗೆ ಭಾಗಕ್ಕೂ ಪೆಟ್ಟಾಗಿದ್ದು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಎಸಿಪಿ ಕಪಾಳಮೋಕ್ಷ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಸಿಪಿ ದರ್ಪಕ್ಕೆ ಸಾರ್ವಜನಿಕರು ಹಾಗೂ ಸಿದ್ದಪ್ಪ ಕುಟುಂಬಸ್ಥರು ಕಿಡಿ ಕಾರುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್. ರವಿಕುಮಾರ್, ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಗಲಾಟೆಯಾಗುತ್ತಿತ್ತು. ಈ ವೇಳೆ ಸಂಚಾರಿ ಠಾಣೆ ಪೇದೆ ಸಿದ್ದಪ್ಪ ಲಾಠಿಚಾರ್ಜ್ ಮಾಡುತ್ತಿದ್ದರು. ಆಗ ಸ್ಥಳಕ್ಕೆ ಎಸಿಪಿ ಗಿರೀಶ್ ಆಗಮಿಸಿ ಪರ್ಮಿಷನ್ ಇಲ್ಲದೇ ಲಾಠಿಚಾರ್ಜ್ ಮಾಡಬಾರದು ಅಂತಾ ಪೇದೆಗೆ ತಿಳಿ ಹೇಳುವ ಸಂದರ್ಭದಲ್ಲಿ ಕಪಾಳಮೋಕ್ಷ ಮಾಡಿದ್ದಾರೆ. ಈ ಬಗ್ಗೆ ಪೇದೆ ದೂರು ನೀಡಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಅಂತಾ ಪೊಲೀಸ್ ಆಯುಕ್ತ ರವಿಕುಮಾರ್ ಹೇಳಿದ್ದಾರೆ.
ಅದೇನೇ ಇರಲಿ ಮೇಲಾಧಿಕಾರಿಗಳು ಸಿಬ್ಬಂದಿ ಜೊತೆ ಸಂಯಮ ಹಾಗೂ ತಾಳ್ಮೆಯಿಂದ ವರ್ತಿಸಬೇಕಿದೆ. ಇನ್ನು ನೊಂದ ಕಾನ್ಸ್‌ಟೇಬಲ್ ಸಿದ್ದಪ್ಪ ಬ್ರಹ್ಮಪುರ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಹೇಳಿದ್ದು, ಆ ನಂತರವಷ್ಟೇ ಘಟನೆಯ ಸತ್ಯಾಸತ್ಯತೆ ಹೊರಬರಲಿದೆ.
ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ