ಬೆಂಗಳೂರು : ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ ರಸ್ತೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಈ ಯೋಜನೆಯಿಂದ ಸಾಕಷ್ಟು ಲಾಭವಾಗಲಿದ್ದು, ಕೆಲವೇ ಗಂಟೆಯಲ್ಲಿ ಎರಡು ನಗರವನ್ನು ಸಂಪರ್ಕಿಸಬಹುದು. ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಮುಖ ಪಾತ್ರ ವಹಿಸಿದ್ದಾರೆ. ಕೆಲ ದಿನದ ಹಿಂದೆ ಮಳೆ ಬಂದು ಬೈಪಾಸ್‌ಗಳಲ್ಲಿ ವಾಹನಗಳು ಸಿಲುಕಿ ಸಾಕಷ್ಟು ಕಷ್ಟ ನಷ್ಟಗಳಾಗಿತ್ತು. ಆದಾದ ಬಳಿಕ ಏನೂ ಆಗೇ ಇಲ್ಲ, ಏನಾದ್ರೂ ಆಗಿದ್ರೆ ದಾಖಲೆ ಕೊಡಿ ಅಂತ ಸಂಸದ ಪ್ರತಾಪ ಸಿಂಹ ಸವಾಲು ಹಾಕಿದ್ರು.
ಈ ಸವಾಲನ್ನು ಸ್ವೀಕರಿಸಿದ ಜೆಡಿಎಸ್ ನಾಯಕರು, ಅವೈಜ್ಞಾನಿಕ ರಸ್ತೆ ಅಂತ ಆರೋಪಿಸಿದ್ರು. ಬೆಂಗಳೂರಿನಿಂದ ಮೈಸೂರಿನವರೆಗೂ ನಿರ್ಮಿಸಿರುವ ಬೈಪಾಸ್ ರಸ್ತೆಗಳು ಅವೈಜ್ಞಾನಿಕವಾಗಿವೆ. ಬಿಡದಿ, ರಾಮನಗರ , ಚನ್ನಪಟ್ಟಣ ಜನ ಸರ್ವಿಸ್ ರಸ್ತೆಯಲ್ಲೇ ಓಡಾಡಬೇಕಾಗಿದೆ. 119 ಕಿಮೀ ರಸ್ತೆಯಲ್ಲಿ ಇಂಟರ್ ಕನೆಕ್ಟ್ ರಸ್ತೆ ಸರಿಯಾಗಿಲ್ಲ. ಕಾಫಿ, ತಿಂಡಿ, ಪೆಟ್ರೋಲ್ ಬಂಕ್‌ಗೂ ಅವಕಾಶ ಇಲ್ಲ. ಬಸ್ ಬೇ ಟ್ರಕ್ ಆ್ಯಂಬುಲೆನ್ಸ್ ನಿಲ್ಲಿಸಲು ಅವಕಾಶ ಇಲ್ಲ. ಹೀಗಾಗಿ ಅವೈಜ್ಞಾನಿಕ ರಸ್ತೆ ಅಂತ ಜೆಡಿಎಸ್ ಶಾಸಕರು ಪ್ರತಾಪ್ ಸಿಂಹ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಈ ರಸ್ತೆಯಲ್ಲಿ ಸಾವಿರಾರು ಕೋಟಿ ಜನರ ಹಣ ಪೋಲಾಗಿದೆ. ಇದು ಹಗರಣದ ಕೂಪವಾಗಿದ್ದು, ಸಿಬಿಐ ತನಿಖೆ ಆಗಲಿ ಅಂತ ಜೆಡಿಎಸ್ ಶಾಸಕರು ಪಟ್ಟು ಹಿಡಿದಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ರಾಷ್ಟ್ರೀಯ ಸಭೆಗಾಗಿ ದೆಹಲಿಗೆ ಹೋಗಿದ್ದಾರೆ. ಸೆಪ್ಟಂಬರ್ 7 ರಂದು ಜೆಡಿಎಸ್ ನಿಯೋಗದ ಜೊತೆ ಎಚ್‌ಡಿಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿಯಾಗೋ ಸಾಧ್ಯತೆಯಿದೆ. ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಆಗಿರೋ ಕುರಿತು ಒಂದು ವರದಿಯನ್ನು ಎಚ್ ಡಿಕೆ ತಯಾರಿಸಿದ್ದಾರೆ. ಹಾಗೇ ಹೆದ್ದಾರಿ ಕಾಮಗಾರಿಯ ಅಕ್ರಮದ ದ ಕುರಿತು ದಾಖಲೆಯನ್ನು ಕೇಂದ್ರ ಸಚಿವರಿಗೆ ನೀಡಲಿದ್ದಾರೆ ಎನ್ನಲಾಗ್ತಿದೆ.
ಒಟ್ಟಿನಲ್ಲಿ ಎಕ್ಸ್‌ಪ್ರೆಸ್ ಹೈವೆಯೂದ್ದಕೂ ಜೆಡಿಎಸ್ ಶಾಸಕರಿರೋ ಕ್ಷೇತ್ರಗಳೇ ಹೆಚ್ಚಾಗಿವೆ. ಹೆದ್ದಾರಿ ನಿರ್ಮಾಣದ ಮೂಲಕ ಪ್ರತಾಪ್ ಸಿಂಹ ವರ್ಚಸ್ಸು ಹೆಚ್ಚುತ್ತಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಿ ಅಕ್ರಮದ ದಾಖಲೆ ಬಿಡುಗಡೆಗೊಳಿಸಿ ಜನರ ಮುಂದಿಡಲು ಜೆಡಿಎಸ್ ನಾಯಕರು ಹೊರಟಿದ್ದಾರೆ.